Home ಟಾಪ್ ಸುದ್ದಿಗಳು ಮಾನಸಿಕ ಖಿನ್ನತೆಯಿಂದ ಐವರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಹತನಾದ ಬೆಳಗಾವಿಯ ಯೋಧ

ಮಾನಸಿಕ ಖಿನ್ನತೆಯಿಂದ ಐವರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಹತನಾದ ಬೆಳಗಾವಿಯ ಯೋಧ

ಬೆಳಗಾವಿ: ಪಂಜಾಬ್ ನ ಅತ್ತಾರಿ-ವಾಘಾ ಗಡಿಯ ಬಳಿ‌ಯ ಸೇನಾ ಶಿಬಿರದಲ್ಲಿ ನಿನ್ನೆ ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ರಾಜ್ಯದ ಗಡಿಭದ್ರತಾ ಪಡೆ(ಬಿಎಸ್ ಎಫ್ )ಯೋಧ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವುದು ಪತ್ತೆಯಾಗಿದೆ.

 ಐವರು ಸಹ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಸತ್ಯಪ್ಪ ಸಿದ್ದಪ್ಪ ಕಿಲಾರಗಿ (33) ಹಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.

ಕಳೆದ 13 ವರ್ಷಗಳ ಹಿಂದ ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತ್ಯಪ್ಪ ಸಿದ್ದಪ್ಪ ಕಿಲಾರಗಿ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನರಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ 1 ತಿಂಗಳ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ, ಬ್ಯಾಂಕ್ ಒಂದರಲ್ಲಿ 10 ಲಕ್ಷ ಸಾಲ ಮಾಡಿ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.

ಮಾನಸಿಕ ಅಸ್ವಸ್ಥತೆ ಕಾರಣ ರಜೆ ಮುಗಿದರೂ ಮರಳಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮನೆಯವರು ಬೆಳಗಾವಿಯಲ್ಲಿ ಕೆಲವು ದಿನಗಳ ಬಳಿಕ ಧಾರವಾಡ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖನಾಗಿ ಪತ್ನಿ ಹಾಗೂ ಮಕ್ಕಳೊಂದಿಗೆ ಮರಳಿದ್ದ ಸತ್ಯಪ್ಪರಿಗೆ, ಕ್ಯಾಂಪಸ್ ಕ್ವಾಟರ್ಸ್ ನಲ್ಲಿ ಕುಟುಂಬಕ್ಕೆ ಅವಕಾಶ ಕೊಡಲಾಗದು ಎಂದಿದ್ದರು. ಹೀಗಾಗಿ‌ ಕುಟುಂಬಸ್ಥರನ್ನು ಮರಳಿ ಊರಿಗೆ ಕಳುಹಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅತ್ತಾರಿ-ವಾಘಾ ಗಡಿಯ ಬಳಿ‌ಯ ಸೇನಾ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ‌ ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾದಿದ್ದಾರೆ. ಪಂಜಾಬ್ ಬಟಾಲಿಯನ್ ಮೂಲಕ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.

Join Whatsapp
Exit mobile version