Home ಟಾಪ್ ಸುದ್ದಿಗಳು ಬೆಕ್ಕಿನ ಪ್ರಾಣ ರಕ್ಷಿಸಲು ಗುಂಡಿಗೆ ಇಳಿದ ಐವರು ಮೃತ

ಬೆಕ್ಕಿನ ಪ್ರಾಣ ರಕ್ಷಿಸಲು ಗುಂಡಿಗೆ ಇಳಿದ ಐವರು ಮೃತ

ಪುಣೆ: ಗುಂಡಿಯೊಂದರಲ್ಲಿ ಬಿದ್ದು ಪ್ರಾಣ ರಕ್ಷಿಸಲು ಹೋರಾಡುತ್ತಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ನೇವಸ ತಾಲ್ಲೂಕಿನ ವಾಕಡಿ ಗ್ರಾಮದಲ್ಲಿ‌ ನಡೆದಿದೆ.

ಬೆಕ್ಕನ್ನು ಹಿಡಿಯಲು ಹೋಗಿ ಒಬ್ಬರಂತೆ ಒಬ್ಬರು ಒಟ್ಟು ಐದು ಮಂದಿ ಗುಂಡಿಯೊಳಗೆ ಬಿದ್ದು ಮೇಲೆ ಬರಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ.

ಬೆಕ್ಕೂ ಸಾವನ್ನಪ್ಪಿದೆ. ಆದರೆ ಆರನೇ ವ್ಯಕ್ತಿಯೂ ಬೆಕ್ಕು ಹಾಗೂ ಇತರ ಐವರನ್ನು ರಕ್ಷಿಸಲು ಗುಂಡಿಗೆ ಇಳಿದಿದ್ದರು. ಈ ವೇಳೆ ಆತನನ್ನು ರಕ್ಷಣಾ ಸಿಬ್ಬಂದಿ ಉಳಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ವಾಕಡೆ ಗ್ರಾಮದ ಕಾಳೆ ಎನ್ನುವವರಿಗೆ ಸೇರಿದ ಗುಂಡಿಯೊಂದನ್ನು ಬಹಳ ದಿನಗಳಿಂದ ಖಾಲಿ ಬಿಡಲಾಗಿತ್ತು. ಅದರಲ್ಲಿ ಗೋಬರ್‌ಗ್ಯಾಸ್‌ಗೆ ಹಾಕುವ ಕಲುಷಿತ ನೀರಿತ್ತು. ಅಲ್ಲಿಗೆ ಹೋದ ಬೆಕ್ಕು ಬಿದ್ದಿದೆ. ಅದು ಮೇಲೆ ಬರಲಾಗದೇ ಕೂಗಲಾರಂಭಿಸಿದೆ. ಮನೆಯ ಬಾಬುಲ್‌ ಕಾಳೆ ಎಂಬಾತ ಇದನ್ನು ಗಮನಿಸಿದ್ದಾನೆ. ಆದರೆ ಗುಂಡಿಯಲ್ಲಿ ಇಳಿಯಲು ಹತ್ತಲು ಸೂಕ್ತ ವ್ಯವಸ್ಥೆಯೂ ಇಲ್ಲ. ಆದರೂ ಹರಸಾಹಸ ಮಾಡಿ ಮೇಲೆತ್ತಲು ಪ್ರಯತ್ನಿಸಿದ್ದಾನೆ. ಆದರೆ ಗುಂಡಿಯಲ್ಲಿ ಮೀಥೇನ್‌ನ ವಿಷಾನಿಲ ತುಂಬಿಕೊಂಡಿದ್ದು ಅದರಿಂದ ಹೊರ ಬರಲಾಗದೇ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಇದನ್ನು ಗಮನಿಸಿದ ಮಾಣಿಕ್‌ ಕಾಳೆ, ಅನಿಲ್‌ ಕಾಳೆ, ಸಂದೀಪ್ ಕಾಳೆ, ಬಾಬಾ ಸಾಹೇಬ್‌ ಎಂಬುವವರೂ ಕೂಡ ಒಬ್ಬೊಬ್ಬರಾಗಿ ಗುಂಡಿಗೆ ಇಳಿದು ಜೀವ ಕಳೆದುಕೊಂಡಿದ್ದಾರೆ. ವಿಷಯ ತಿಳಿದು ಅಕ್ಕಪಕ್ಕ ಮನೆಯವರು, ಊರಿನವರು ಅಲ್ಲಿ ಸೇರಿದರೂ (ಮಂಗಳವಾರ) ರಾತ್ರಿಯಾಗಿದ್ದರಿಂದ ಶವ ಹೊರ ತೆಗೆಯಲು ಆಗಿರಲಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ನೇವಸ ತಾಲ್ಲೂಕು ತಹಸಿಲ್ದಾರ್‌ ನೇತೃತ್ವದಲ್ಲಿ ಗುಂಡಿಯಲ್ಲಿರುವ ಶವಗಳನ್ನು ಅಗ್ನಿ ಶಾಮಕ ದಳ, ರಕ್ಷಣಾ ಸಿಬ್ಬಂದಿ ಹಾಗೂ ಊರವರ ಸಹಕಾರದಿಂದ ಹೊರ ತೆಗೆಯಲಾಗಿದೆ.

Join Whatsapp
Exit mobile version