ಲಕ್ನೋ: ದನವನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಅಜಂಗಡ ಜಿಲ್ಲೆಯ ಮೆನ್ಹ್ ನಗರ್ ತಾಲೂಕಿನ ಖತ್ರನ್ ಗ್ರಾಮದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಸಹಿತ ಐವರನ್ನು ಬಂಧಿಸಲಾಗಿದ್ದು, ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಸ್ಥಳೀಯ ಪೊಲೀಸರು ಮಾರ್ಚ್ 25ರಂದು ಖತ್ರನ್ ಗ್ರಾಮದ ಶಾಹಿದ್ ಮತ್ತು ಸಲ್ಮಾನ್ ಸೊಹ್ರಾಬ್ ಅವರನ್ನು ಹಸು ಮಾಂಸದ ಆರೋಪದ ಮೇಲೆ ಬಂಧಿಸಿದ್ದಾರೆ. ಇನ್ನು ಬಂಧಿತ ಇಬ್ಬರು ಮಹಿಳೆಯರು 17 ಮತ್ತು 18ರ ಪ್ರಾಯದವರು ಎಂದು ತಿಳಿದು ಬಂದಿದೆ.
ಬಂಧಿತರ ಮನೆಯಲ್ಲಿ ಪೊಲೀಸರು ನಾಲ್ಕು ಕ್ವಿಂಟಾಲ್ ತಾಜಾ ಜಾನುವಾರು ಮಾಂಸ ಮತ್ತು ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಂಧನದ ಬಳಿಕ ಖತ್ರನ್ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೆಲವರು ಊರನ್ನೇ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.
ನಾವು ರಂಝಾನಿನ ತರಾವೀಹ್ ನಮಾಝ್ ಮುಗಿಸಿ, ಇಶಾ ಪ್ರಾರ್ಥನೆಗೆ ತಯಾರಾಗುವಾಗ ಹದಿನೈದು ಜನರ ಪೊಲೀಸರ ತಂಡವು ನಮ್ಮ ನಡುವೆ ನುಗ್ಗಿದೆ. ಇಬ್ಬರು ಮಹಿಳೆಯರ ಸಹಿತ ಆ ಮನೆಯ ಐವರನ್ನು ನಮ್ಮ ಎದುರೇ ಬಂಧಿಸಿದ್ದಾರೆ. ಸಂತ್ರಸ್ತ ಕುಟುಂಬದವರು ಎನ್’ಜಿಓ ಮತ್ತು ರಾಜಕೀಯ ಪಕ್ಷಗಳ ಸಹಾಯವನ್ನು ಯಾಚಿಸಿದ್ದಾರೆ. ಇಬ್ಬರು ಎಳೆಯ ಯುವತಿಯರನ್ನು ಬಂಧಿಸಿರುವುದರಿಂದ ಪರಿಸ್ಥಿತಿಯು ತುಂಬ ಸೂಕ್ಷ್ಮವಾಗಿದೆ ಎಂದು ತಿಳಿದುಬಂದಿದೆ.