ಮುಸ್ಲಿಮ್ ಬಾಲಕಿಯ ಅಪಹರಿಸಿದ ಆರ್ ಎಸ್ ಎಸ್ ನಾಯಕ ಸೇರಿ ಐವರ ಬಂಧನ

Prasthutha|

ಅಗರ್ತಲಾ: ಅಪ್ರಾಪ್ತ ವಯಸ್ಸಿನ ಮುಸ್ಲಿಮ್ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ತ್ರಿಪುರಾ ಪೊಲೀಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ –ಆರ್ ಎಸ್ ಎಸ್ ನ ಸ್ಥಳೀಯ ಮುಖಂಡ ತಪನ್ ದೇಬಂತ್ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಮುಸ್ಲಿಮ್ ಸಮುದಾಯಕ್ಕೆ ಸೇರಿದ 16 ವರ್ಷ ವಯಸ್ಸಿನ ಬಾಲಕಿಯನ್ನು ಬಿಶಾಲಗರ್ ನ ಚಂದಂತಿಲ್ಲಾ ನಿವಾಸಿ ಸುಮನ್ ಸರ್ಕಾರ್ (23) ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಸೆಪಹಿಜಾಲ ಜಿಲ್ಲೆಯ ಬಿಸಾಲ್ ಗರ್ ಚಾರಿಲಾಮ್ ಎಂಬಲ್ಲಿ ಈ ಘಟನೆ ನಡೆದಿದೆ.
ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯ ಘಟಕದ ಅಧ್ಯಕ್ಷ ಚಂದ್ರ ಶೇಖರ್ ಕರ್ ಎಂಬಾತನನ್ನು ಬಂಧಿಸಿದ ಒಂದು ದಿನದ ನಂತರ ಆರ್‌ಎಸ್‌ಎಸ್ ನಾಯಕ ತಪನ್ ದೇಬ್ ನಾಥ್ ನನ್ನು ಅಗರ್ತಲಾದ ಇಂದ್ರನಗರ ಪ್ರದೇಶದಿಂದ ಬಂಧಿಸಲಾಗಿದೆ.

- Advertisement -


ಸರ್ಕಾರ್ ಬಾಲಕಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದ ನಂತರ ಆಕೆಯನ್ನು ಮದುವೆಯಾದನೆಂದು ವರದಿಯಾಗಿದೆ. ದೇಬ್ ನಾಥ್ ಮತ್ತು ಚಂದ್ರ ಶೇಖರ್ ಇಡೀ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಈ ಸಂಬಂಧ ನಾವು ಐವರನ್ನು ಬಂಧಿಸಿದ್ದು, ಇನ್ನಷ್ಟು ಜನರ ಪಾತ್ರ ಇರುವ ಬಗ್ಗೆ ಸುಳಿವು ದೊರೆತಿದೆ. ಶೀಘ್ರದಲ್ಲೇ ಬಾಲಕಿಯನ್ನು ರಕ್ಷಿಸುವ ವಿಶ್ವಾಸವಿದೆ. ಜೋಡಿ ಇನ್ನೂ ತರೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸೆಪಹಿಜಾಲದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೃಷ್ಣೆಂದು ಚಕ್ರವರ್ತಿ ಮಾಹಿತಿ ನೀಡಿದ್ದಾರೆ.


ಬಾಲಕಿ ನಾಪತ್ತೆಯಾದ ಒಂದು ದಿನದ ನಂತರ, ಕಾಣೆಯಾದ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರಂಭದಲ್ಲಿ ಬಾಲಕಿಯನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಬಾಲಕಿಯನ್ನು ಪತ್ತೆ ಹಚ್ಚಿ ಸೆಪ್ಟೆಂಬರ್ 2 ರೊಳಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ ಪೊಲೀಸರು ಈ ಗಡುವಿನೊಳಗೆ ಬಾಲಕಿಯನ್ನು ಪತ್ತೆ ಹಚ್ಚಲು ವಿಫಲರಾಗಿದ್ದಾರೆ.
ತ್ರಿಪುರಾದ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ವಿಚಾರಣೆ ನಡೆಸಿ, ಸೆಪ್ಟೆಂಬರ್ 7 ರೊಳಗೆ ಕಾಣೆಯಾದ ಹುಡುಗಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಎಸ್ಪಿ ಚಕ್ರವರ್ತಿ ಅವರಿಗೆ ಸೂಚಿಸಿತು.


ಅರ್ಜಿದಾರರ ಮಗಳನ್ನು ಪತ್ತೆ ಹಚ್ಚಿ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಸೆಪ್ಟೆಂಬರ್ 7ರ ಮೊದಲು ಬಾಲಕಿಯನ್ನು ಪತ್ತೆ ಮಾಡಿದ್ದರೆ ಅಥವಾ ಆಕೆ ಪೊಲೀಸರ ವಶದಲ್ಲಿದ್ದರೆ, ಪ್ರಕರಣದ ವಿಚಾರಣೆಯನ್ನು ಮೊದಲೇ ನಡೆಸಲು ಕೋರಬಹುದು ಎಂದು ನ್ಯಾಯಾಲಯ ಹೇಳಿದೆ.


“ಪ್ರಕರಣದ ವಿಚಾರಣೆ ನಡೆಯುವವರೆಗೂ, ಆಕೆಯನ್ನು ಮಹಿಳಾ ಸಂರಕ್ಷಣಾ ಕೇಂದ್ರದಲ್ಲಿ ಸುರಕ್ಷಿತ ಕಸ್ಟಡಿಯಲ್ಲಿ ಇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ಬಾಲಕಿಯ ಪಾಲನೆಯನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಬಾರದು ಎಂದು ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿತು.
ಹೈಕೋರ್ಟ್ ನ ಮಧ್ಯಪ್ರವೇಶನದ ನಂತರ, ಪೊಲೀಸರು ಸರ್ಕಾರ್ ತಂದೆ ಫಲು ಸರ್ಕಾರ್ ಮತ್ತು ಸ್ನೇಹಿತನನ್ನು ಬಂಧಿಸಿದೆ.

- Advertisement -