Home ಟಾಪ್ ಸುದ್ದಿಗಳು ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಜಾಲ ಪತ್ತೆ: ಮಹಿಳೆ ಸೇರಿ ಐವರ ಬಂಧನ

ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಜಾಲ ಪತ್ತೆ: ಮಹಿಳೆ ಸೇರಿ ಐವರ ಬಂಧನ

ಬೆಂಗಳೂರು: ಅಕ್ರಮವಾಗಿ ನಕಲಿ ಛಾಪಾ ಕಾಗದ ಸೃಷ್ಟಿಸಿ ಎಂಬೋಜಿಂಗ್ ಪ್ರಾಕಿಂಗ್ ಅಸಲಿಯೆಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿದ್ದ ಮಹಿಳೆ ಸೇರಿ ಐವರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.


ದಂಧೆಕೋರರ ಜಾಲದಲ್ಲಿದ್ದ ವಿವೇಕನಗರದ ಹುಸೇನ್ ಮೋದಿ ಬಾಬು(58), ಬಾಪೂಜಿನಗರದ ಸೀಮಾ ಅಲಿಯಾಸ್ ಶಾವರ್ (45)ಶಾಮಣ್ಣನಗರದ ನಯಾಜ್ ಅಹಮದ್(45), ವಿಜಯನಗರದ ಶಬ್ಬೀರ್ ಅಹಮದ್(38) ಹಾಗೂ ಬಸವೇಶ್ವರನಗರದ ಹರೀಶ್(55) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಬಂಧಿತ ಆರೋಪಿಗಳು ನಕಲಿ ಫಾಂಟ್ ಗಳು , ಸೀಲ್ ಗಳು ಹಾಗೂ ಸ್ಕ್ರೀನ್ ಪ್ರಿಂಟಿಂಗ್ ಬಳಸಿ ಛಾಪಾ ಕಾಗದ ಸೃಷ್ಟಿಸುತ್ತಿದ್ದರು. ಅಲ್ಲದೇ ಮೈಸೂರು ಮಹಾರಾಜರ ಕಾಲದಲ್ಲಿದ್ದ ಛಾಪಾ ಕಾಗದ ರೀತಿಯಲ್ಲಿಯೂ ಕಾಗದ ಸೃಷ್ಟಿ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಹಳೆಯ ನಿವೇಶನ ಮನೆಗಳನ್ನು ಅಕ್ರಮವಾಗಿ ವಶಕ್ಕೆ ಪಡೆಯಲು ಇಂತಹ ನಕಲಿ ಛಾಪ ಕಾಗದ ಸೃಷ್ಟಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ ಲಕ್ಷಾಂತರ ರೂಗಳ ವಂಚನೆಯನ್ನು ನಡೆಸಲಾಗಿದೆ. ಬಂಧಿತರ ಬಳಿ 2 ರೂಪಾಯಿ ಚಾಪಾ ಕಾಗದದಿಂದ ಆರಂಭವಾಗಿ 25 ಸಾವಿರ ಮೌಲ್ಯದ ಛಾಪಾ ಕಾಗದವರೆಗೆ ಲಭ್ಯವಾಗುತ್ತಿತ್ತು ಒಟ್ಟು 63 ಲಕ್ಷ ಮೌಲ್ಯದ ನಕಲಿ ಚಾಪಾ ಕಾಗದವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬಂಧಿತರಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಾಟನ್ ಪೇಟೆ ಹೆಸರಿನ ಚಿಕ್ಕ ರೌಂಡ್ ಸೀಲು, ರಬ್ಬರ್ ಸೀಲುಗಳು, ರಬ್ಬರ್ ಸೀಲುಗಳಿಗೆ ಬಳಸುವ ವಿವಿಧ ಇಸವಿ ಹಾಗೂ ತಿಂಗಳುಗಳ ಪ್ಲಾಸ್ಟಿಕ್ ಕಟ್ ಪೀಸ್ ಜೊತೆಗೆ ಪ್ಲಾಸ್ಟಿಕ್ ಡಬ್ಬಗಳು. ಚಿಕ್ಕ ದೊಡ್ಡ ಗಾತ್ರದ ಸ್ಕ್ರೀನ್, ಪ್ರಿಂಟ್ ಮೇಷಿನ್ 4 ಉಜ್ಜುವ ಪ್ಯಾಡುಗಳು, ಗವರ್ನಮೆಂಟ್ ಆಫ್ ಇಂಡಿಯಾ ಎಂದು ಆಂಗ್ಲ ಭಾಷೆಯಲ್ಲಿ ಭಾರತ್ ಸರ್ಕಾರ್ ಎಂದು ಹಿಂದಿ ಭಾಷೆಯಲ್ಲಿ ಮುದ್ರಿತವಾದ ವಾಟರ್ ಮಾರ್ಕ್ ಇರುವ ಛಾಪ ಕಾಗದಗಳನ್ನು ಮುದ್ರಿಸಲು
ಉಪಯೋಗಿಸುವ ಒಟ್ಟು 233 ಖಾಲಿ ಹಾಳೆಗಳು ಖಾಲಿ ಇ-ಸ್ಟಾಂಪ್ ಪೇಪರ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ಆರೋಪಿಗಳು ಪರಿಚಯಸ್ಥರಾಗಿದ್ದು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಜಾಲವನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಕಾನೂನು ಬಾಹಿರವಾಗಿ ಸರ್ಕಾರಿ ದಸ್ತಾವೇಜು ದಾಖಲಾತಿಗಳನ್ನು 2005ನೇ ಸಾಲಿನಿಂದಲೂ, 2020ಕ್ಕೆ ಹಿಂದಿನ ವರ್ಷಗಳ ನಕಲಿ ಛಾಪಾ ಕಾಗದಗಳನ್ನು ಅಸಲುಗಳೆಂಬಂತೆ ಬಿಂಬಿಸಿ ಪರಿಚಯಸ್ಥ ಸಾರ್ವಜನಿಕರಿಗೆ ಗಿರಾಕಿಗಳಿಗೆ 3ರಿಂದ 5ಸಾವಿರ ರೂ ಹಾಗೂ ಅಪರಿಚಿತರಿಗೆ 5ರಿಂದ ರಿಂದ 10 ಸಾವಿರರೂ ವರೆಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು ಎಂದು ತಿಳಿಸಿದರು.


ಹಲಸೂರು ಗೇಟ್ ನ ಎರಡು ಹಾಗೂ ಹೆಎಎಲ್ ನ ಒಂದು ನಕಲಿ ಛಾಪಕಾಗದಗಳ ವಂಚನೆ ಪ್ರಕರಣದ ಪತ್ತೆಗಾಗಿ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್ .ಡಿ.ಶರಣಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಜಾಲವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಡಿಸಿಪಿ ಶರಣಪ್ಪ ಅವರಿದ್ದರು.

Join Whatsapp
Exit mobile version