ಉಳ್ಳಾಲ: ಮೀನು ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿದ ಮುಸುಕುಧಾರಿಗಳ ಗುಂಪೊಂದು ತಲವಾರು ದಾಳಿ ನಡೆಸಿ 2.50 ಲಕ್ಷ ರೂ. ನಗದು ದರೋಡೆಗೈದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆಡಂಕುದ್ರು ಎಂಬಲ್ಲಿ ಶನಿವಾರ ಬೆಳಗ್ಗಿನ ಜಾವ ನಡೆದಿದೆ.
ಉಳ್ಳಾಲ ಕೋಟೆಪುರ ಮೀನಿನ ವ್ಯಾಪಾರಿ ಮುಸ್ತಫಾ (47) ತಲವಾರು ದಾಳಿಗೆ ಒಳಗಾದವರು. ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಎರಡೂ ಕೈ, ಕಾಲು ಮತ್ತಿತರ ಕಡೆಗಳಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 6.15ರ ವೇಳೆಗೆ ಮುಸ್ತಫಾ ಅವರು ಎಂದಿನಂತೆ ಬೆಳಗ್ಗೆ ತನ್ನ ಏಸ್ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಮೀನು ತರಲೆಂದು ಹೊರಟಿದ್ದರು. ಮಾಸ್ತಿಕಟ್ಟೆಯ ಮೂಸ ಎಂಬವರು ಅವರ ಜೊತೆಗೆ ಟೆಂಪೋದಲ್ಲಿ ಪಯಣಿಸುತ್ತಿದ್ದರು.
ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಹಿಂಬಾಲಿಸಿ ಬಂದ ಕೆಂಪು ಬಣ್ಣದ ರಿಟ್ಝ್ ಕಾರು ಮುಸ್ತಫಾ ಅವರ ಕಾರಿಗೆ ಅಡ್ಡ ಇಟ್ಟಿದೆ. ರಿಟ್ಝ್ ಕಾರಲ್ಲಿ ಮೂವರು ಮುಸಕುಧಾರಿಗಳಿದ್ದು ಇಬ್ಬರು ಕೆಳಗಿಳಿದು ಮುಸ್ತಫಾ ಅವರಲ್ಲಿದ್ದ ಹಣದ ಬ್ಯಾಗನ್ನು ಕೊಡುವಂತೆ ಹೇಳಿದ್ದಾರೆ. ಟೆಂಪೋದಲ್ಲಿಯೇ ಇದ್ದ ಮುಸ್ತಫಾ ಅವರು ಹಣ ಕೊಡಲು ನಿರಾಕರಿಸಿದಾಗ ಮುಸುಕುಧಾರಿಗಳು ತಲವಾರನ್ನು ಮುಸ್ತಫಾ ಅವರ ಕುತ್ತಿಗೆಗೆ ಇಟ್ಟು ಹಣ ಎಗರಿಸಿದ್ದು ವಿರೋಧಿಸಿದ ಮುಸ್ತಫಾ ಅವರು ತಲವಾರಿನ ಅಲಗನ್ನು ಗಟ್ಟಿಯಾಗಿ ಎರಡು ಕೈಗಳಲ್ಲಿ ಹಿಡಿದಿದ್ದು ಆಗಂತುಕರು ತಲವಾರನ್ನು ಎಳೆದಾಗ ಎರಡೂ ಕೈಗಳಿಗೂ ಗಂಭೀರ ಗಾಯಗಳಾಗಿದೆ. ಮುಸ್ತಫಾ ಅವರಲ್ಲಿದ್ದ 2 ಲಕ್ಷ 5 ಸಾವಿರ ರೂ. ಬ್ಯಾಗ್ ನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಫಾ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರೋಡೆ ನಡೆದ ಸ್ಥಳಕ್ಕೆ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.