Home ಟಾಪ್ ಸುದ್ದಿಗಳು ಗುಡಿಸಲಿಗೆ ಆಕಸ್ಮಿಕ ಬೆಂಕಿ: ಮೂವರು ಬಾಲಕರು ಮೃತ್ಯು

ಗುಡಿಸಲಿಗೆ ಆಕಸ್ಮಿಕ ಬೆಂಕಿ: ಮೂವರು ಬಾಲಕರು ಮೃತ್ಯು

ಬರ್ವಾನಿ (ಮಧ್ಯಪ್ರದೇಶ): ಗುಡಿಸಲಿಗೆ ಬೆಂಕಿ ತಗುಲಿ ಮೂವರು ಸಹೋದರರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.


ಮೃತರನ್ನು ಮುಖೇಶ್ (10), ರಾಕೇಶ್ (8) ಮತ್ತು ಏಕೇಶ್ (6) ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ-ಮಹಾರಾಷ್ಟ್ರ ಗಡಿಯಲ್ಲಿರುವ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋರ್ಕುಂಡ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.


ಅವಘಡದಲ್ಲಿ ನಾಲ್ಕು ಮೇಕೆಗಳು ಮತ್ತು ಒಂದು ಹೋರಿ ಸುಟ್ಟು ಕರಕಲಾಗಿವೆ ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ.
ಅವಘಡದ ವೇಳೆ ಮಕ್ಕಳ ಪೋಷಕರು ಮನೆಯ ಸಮೀಪ ಬಾವಿ ತೋಡುತ್ತಿದ್ದರು. ಸುಮಾರು 10-12 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಹೊಗೆಯನ್ನು ನೋಡಿದ ಪೋಷಕರು ಗುಡಿಸಲಿನ ಬಳಿ ತಲುಪಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಅವರ ಗುಡಿಸಲು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಬಾಲಕರ ತಾಯಿ ಅಡುಗೆ ಮಾಡಿದ ನಂತರ ಒಲೆಯ ಆರಿಸದಿರುವುದು ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.


ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಡಾ. ರಾಹುಲ್ ಹರಿದಾಸ್ ಫಟಿಂಗ್ ಮೃತ ಬಾಲಕರ ಕುಟುಂಬಕ್ಕೆ 12 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಘೋಶಿಸಿದ್ದಾರೆ.

Join Whatsapp
Exit mobile version