Home ಕರಾವಳಿ ತೊಕ್ಕೊಟ್ಟುವಿನಲ್ಲಿ ಅಗ್ನಿ ಅವಘಡ; ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಆಟೋ ಮೊಬೈಲ್ ಶಾಪ್

ತೊಕ್ಕೊಟ್ಟುವಿನಲ್ಲಿ ಅಗ್ನಿ ಅವಘಡ; ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಆಟೋ ಮೊಬೈಲ್ ಶಾಪ್

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿರುವ ಆಟೋಮೊಬೈಲ್ ಮಳಿಗೆ ಒಂದರಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಂಗಡಿ ಸಂಪೂರ್ಣ ಆಹುತಿಯಾಗಿದೆ.  

ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಕೊರಗಜ್ಜನ ಕಟ್ಟೆಯ ಸನಿಹದ ಕಟ್ಟಡದಲ್ಲಿ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕುಂಪಲ ನಿವಾಸಿ ಭರತ್ ಎಂಬವರಿಗೆ ಸೇರಿದ ‘ಗೋಲ್ಡನ್ ಸ್ಟಾರ್’ ಹೆಸರಿನ ದ್ವಿಚಕ್ರ ವಾಹನಗಳ ಆಟೋ ಮೊಬೈಲ್ ಮಳಿಗೆ ಬೆಂಕಿಗಾಹುತಿಯಾಗಿದೆ.

ಅಂಗಡಿ ಮಾಲಕ ಭರತ್ ಬೆಳಗ್ಗೆ ಒಂಬತ್ತು ಗಂಟೆಗೆ ಅಂಗಡಿಯನ್ನು ತೆರೆದಿದ್ದು ನಂತರ ಯಾವುದೋ ಅಗತ್ಯ ಕೆಲಸಕ್ಕಾಗಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದರೆನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದ್ದು ಧಗ ಧಗನೆ ಹೊತ್ತಿ ಉರಿದಿದೆ. ಶಾಪ್ ಒಳಗಿದ್ದ ಪ್ಲಾಸ್ಟಿಕ್, ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಸ್ಥಳೀಯರು, ಉಳ್ಳಾಲ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ್ದಾರೆ.

ಘಟನೆಯಿಂದಾಗಿ ಧಗಧಗನೆ ಹೊತ್ತಿ ಉರಿದ ಬೆಂಕಿ ಮತ್ತು ಆವರಿಸಿದ ಹೊಗೆ ತೊಕ್ಕೊಟ್ಟಿನಲ್ಲಿ ಕೆಲಕಾಲ ಆತಂಕದ ಕ್ಷಣಗಳಿಗೆ ಸಾಕ್ಷಿಯಾಯ್ತು.

Join Whatsapp
Exit mobile version