ಮೈಸೂರು: ಮಠದ ಉಚಿತ ಹಾಸ್ಟೆಲ್ ನಲ್ಲಿರುವ ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂಬ ಗಂಭೀರ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿನಿಯರಿಬ್ಬರು ಮೈಸೂರಿನಲ್ಲಿರುವ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ಶುಕ್ರವಾರ ದೂರು ನೀಡಿದ್ದರು.
ವಾರಕ್ಕೊಮ್ಮೆ ‘ಹಣ್ಣು ಮತ್ತು ಸಿಹಿಯ ಆಶೀರ್ವಾದ’ದ ನೆಪದಲ್ಲಿ ಏಕಾಂತಕ್ಕೆ ಕರೆಸಿಕೊಳ್ಳುವ ಸ್ವಾಮೀಜಿಯು, ಬಾಲಕಿಯರ ಕುಟುಂಬದ ಮಾಹಿತಿಯನ್ನು ಪಡೆಯುತ್ತಾರೆ. ಪೋಷಕರಿಗೆ ಕಷ್ಟವಿದ್ದರೆ ಅಗತ್ಯ ನೆರವು ಒದಗಿಸುವುದಾಗಿಯೂ ಭರವಸೆ ನೀಡುತ್ತಾರೆ. ನಂತರ ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ’ ಎಂದೂ ವಿದ್ಯಾರ್ಥಿನಿಯರು ದೂರಿದ್ದಾರೆ.
ವಿದ್ಯಾರ್ಥಿನಿಯರು ಸರದಿಯಂತೆ ಕಡ್ಡಾಯವಾಗಿ ಸ್ವಾಮೀಜಿ ಬೆಡ್ ರೂಂಗೆ ಹೋಗಬೇಕು. ಹೋಗಲು ಒಪ್ಪದಿದ್ದರೆ, ಹಾಸ್ಟೆಲ್ ವಾರ್ಡನ್ ಸೇರಿ ಕೆಲ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ
ವಿಚಾರಣೆ ನಡೆಸಿದ ಒಡನಾಡಿ ಸಂಸ್ಥೆಯು ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ನೀಡಿತ್ತು. ಸಮಿತಿ ಆದೇಶದ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ನೀಡಿದ ದೂರು ಆಧರಿಸಿ ನಜರ್ಬಾದ್ ಠಾಣೆಯಲ್ಲಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಎಫ್ಐಆರ್ ದಾಖಲಿಸಲಾಗಿದೆ.