Home ಟಾಪ್ ಸುದ್ದಿಗಳು ಗನ್ ತೋರಿಸಿ ಹೋಟೆಲ್’ನಲ್ಲಿ ಅತ್ಯಾಚಾರ: ಮಾಜಿ ಆರ್’ಜೆಡಿ ಶಾಸಕ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧ FIR

ಗನ್ ತೋರಿಸಿ ಹೋಟೆಲ್’ನಲ್ಲಿ ಅತ್ಯಾಚಾರ: ಮಾಜಿ ಆರ್’ಜೆಡಿ ಶಾಸಕ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧ FIR

ಪಾಟ್ನಾ: ಗನ್ ತೋರಿಸಿ ದಿಲ್ಲಿ ಹೋಟೆಲಿನಲ್ಲಿ ಅತ್ಯಾಚಾರ ಎಸಗಿದ ಆರೋಪದಲ್ಲಿ ದಾನಾಪುರದ ನ್ಯಾಯಾಲಯದ ಆದೇಶದಂತೆ ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಹಾಗೂ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕರೊಬ್ಬರ ವಿರುದ್ಧ ಪ್ಕರಣ ದಾಖಲಿಸಿರುವುದಾಗಿ ಪಾಟ್ನಾದ ರೂಪಸಾಗರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.


ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ಮತ್ತು ಮಾಜಿ ಶಾಸಕ ಗುಲಾಬ್ ಯಾದವ್ ಮೇಲೆ ಮೊಕದ್ದಮೆ ದಾಖಲಿಸುವಂತೆ ಬಿಹಾರದ ನ್ಯಾಯಾಲಯವೊಂದು ಆದೇಶ ನೀಡಿತ್ತು. 2021ರಲ್ಲಿ ದಿಲ್ಲಿ ಹೋಟೆಲಿನಲ್ಲಿ ಈ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.


ಸಂಜೀವ್ ಹನ್ಸ್ ಮತ್ತು ಗುಲಾಬ್ ಯಾದವ್ ಅವರು ಗನ್ ತೋರಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಸೂಕ್ತ ಸೆಕ್ಷನ್ ಗಳಡಿ ಮೊಕದ್ದಮೆ ಹೂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಹಾಕಿರುವ ಅರ್ಜಿಯ ವಿಚಾರಣೆ ನಡೆಸಿದ ದಾನಾಪುರ ಸಿವಿಲ್ ಕೋರ್ಟಿನ ಹೆಚ್ಚುವರಿ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್, ಇಬ್ಬರ ಮೇಲೂ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ತೀರ್ಪು ನೀಡಿದ್ದರು. 2021ರಲ್ಲಿ ಮಹಿಳೆ ದೂರು ನೀಡಿದ ಮೇಲೆ ನ್ಯಾಯಾಲಯ ಈ ಬಗ್ಗೆ ಪೊಲೀಸರಿಂದ ಪ್ರಾರಂಭಿಕ ತನಿಖೆಯ ಮಾಹಿತಿಯನ್ನು ಪಾಟ್ನಾ ಪೋಲೀಸರಿಂದ ತೆಗೆದುಕೊಂಡಿದೆ.
ಪಾಟ್ನಾ ಪೊಲೀಸರು ಮೊದಲು ಈ ಬಗ್ಗೆ ವರದಿಯನ್ನೇ ನೀಡಲಿಲ್ಲವಾದ್ದರಿಂದ ಕೋರ್ಟ್ ಪ್ರಕರಣವನ್ನು ವಜಾ ಮಾಡಿತ್ತು.


ಕೂಡಲೇ ಮಹಿಳೆಯ ವಕೀಲರು ಇದನ್ನು ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ಮರು ತನಿಖೆಗೆ ಆದೇಶಿಸಿದ ಹೈಕೋರ್ಟು, ದಾನಾಪುರ ಕೋರ್ಟಿಗೆ ಪಾಟ್ನಾ ಪೊಲೀಸರು ಈ ಕೂಡಲೆ ಆರಂಭಿಕ ತನಿಖಾ ವರದಿಯನ್ನು ಒಪ್ಪಿಸುವಂತೆ ಸೂಚಿಸಿತ್ತು. ಮಾತ್ರವಲ್ಲ ಕೋರ್ಟ್ ಆ ಸಂಬಂಧ ಪಾಟ್ನಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.


ಹೈಕೋರ್ಟ್ ಆಜ್ಞೆಯಂತೆ ದಾನಾಪುರ ನ್ಯಾಯಾಲಯದಲ್ಲಿ ಪ್ರಕರಣದ ಮರು ವಿಚಾರಣೆ ಆರಂಭವಾಯಿತು. ಪ್ರಕರಣ ನಡೆದ ದಿನ ಸಂತ್ರಸ್ತ ಮಹಿಳೆ ಮತ್ತು ಸಂಜೀವ್ ಹನ್ಸ್ ಮತ್ತು ಗುಲಾಬ್ ಯಾದವ್ ದಿಲ್ಲಿಯ ಆ ಹೋಟೆಲಿನಲ್ಲಿ ಇದ್ದುದು ಸ್ಪಷ್ಟಗೊಂಡಿತ್ತು.


ನನ್ನನ್ನು ಮಹಿಳಾ ಆಯೋಗದ ಸದಸ್ಯೆ ಮಾಡುವುದಾಗಿ ಗುಲಾಬ್ ಹನ್ಸ್ ಆಮಿಷವೊಡ್ಡಿ ಕರೆದುಕೊಂಡು ಬಂದಿದ್ದರು. ಒಂದು ದಿನ ತನ್ನ ರುಕಾನ್ ಪುರದ ಫ್ಲಾಟ್’ಗೆ ಕರೆಸಿಕೊಂಡ ಗುಲಾಬ್ ಯಾದವ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಅದರ ವೀಡಿಯೋ ಕೂಡ ಮಾಡಿಕೊಂಡಿದ್ದರು. ಇದರ ಬಳಿಕ ಗುಲಾಬ್ ನನ್ನನ್ನು ಬ್ಲಾಕ್ ಮೇಲ್ ಮಾಡತೊಡಗಿದರು ಎಂದು ಮಹಿಳೆ ದೂರಿದ್ದಾರೆ.


ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ದಿಲ್ಲಿಗೆ ಕರೆಸಿಕೊಂಡರು. ಅಲ್ಲಿ ಸಂಜೀವ್ ಹನ್ಸ್ ಕೂಡ ಇದ್ದರು. ಇಬ್ಬರೂ ಗನ್ ಪಾಯಿಂಟ್’ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ಆ ಸಮಯದಲ್ಲಿ ಗುಲಾಬ್ ಯಾದವ್ ಜಂಜರ್ ಪುರದ ಶಾಸಕರಾಗಿದ್ದರು ಮತ್ತು ಸಂಜೀವ್ ಹನ್ಸ್ ಪಾಟ್ನಾದಲ್ಲಿ ಅಧಿಕಾರಿಯಾಗಿದ್ದರು ಎಂದು ಸಂತ್ರಸ್ತೆಯ ವಕೀಲ ರಂಜನ್ ಕುಮಾರ್ ಶರ್ಮಾ ಹೇಳಿದರು.
2021ರಲ್ಲಿ ಸಂತ್ರಸ್ತೆಯ ದೂರು ನೀಡಿದ್ದರೂ ಪೊಲೀಸರು ಸರಿಯಾಗಿ ಕರ್ತವ್ಯ ಎಸಗಲಿಲ್ಲ. ಈಗ ಹೈಕೋರ್ಟ್ ಕಿವಿ ಹಿಂಡಿದ ಮೇಲೆ ಎಚ್ಚರ ಆಗಿದ್ದಾರೆ ಎಂದೂ ವಕೀಲರು ತಿಳಿಸಿದರು. ಆಗ ದಾನಾಪುರ ಕೋರ್ಟಿಗೆ ವರದಿ ನೀಡದೆ ಪ್ರಕರಣ ಬಿದ್ದು ಹೋಗುವಂತೆ ಮಾಡಿದ್ದರು ಎಂದೂ ಅವರು ಹೇಳಿದರು. ಈಗ ಪ್ರಕರಣದ ವಿಚಾರಣೆ ವೇಗ ಪಡೆದಿದೆ.

Join Whatsapp
Exit mobile version