ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳ ಹಿಂದಿನ ದೋಣಿ ದುರಂತದಲ್ಲಿ ಸಾವಿಗೀಡಾದ 20 ಮಕ್ಕಳ ಕುರಿತು ಪೋಸ್ಟ್ ಹಾಕಿದ್ದ ಪತ್ರಕರ್ತನ ವಿರುದ್ಧ ಪೊಲೀಸರು ಗಂಭೀರ ಆರೋಪಗಳಡಿ ದೂರು ದಾಖಲಿಸಿದ್ದಾರೆ. ಪತ್ರಕರ್ತನ ವಿರುದ್ಧ ಶಾಂತಿ ಕದಡಿದ, ಭೀತಿ ಸೃಷ್ಟಿಸಿದ ಮತ್ತು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ದೂರು ದಾಖಲಾಗಿದೆ.
ಬಂಡಿಪೋರ ಜಿಲ್ಲೆಯ ಸ್ಥಳೀಯ ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಸಾಜಿದ್ ರೈನಾ ಎಂಬವರು 2006ರಲ್ಲಿ ವುಲಾರ್ ಸರೋವರದಲ್ಲಿ ನಡೆದ ದೋಣಿ ದುರಂತದ ಬಗ್ಗೆ ಸ್ಕ್ರೀನ್ ಶಾಟ್ ಒಂದನ್ನು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ್ದರು. ಈ ವಿಷಯಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿದೆ.
ರೈನಾ ವಿರುದ್ಧದ ದೂರನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಸಾಜಿದ್ ರೈನಾ ಹಾಕಿರುವ ಸ್ಟೇಟಸ್ ನ ಹಿಂದಿನ ಉದ್ದೇಶವೇನು ಎಂಬುದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.