ಬೆಂಗಳೂರು: ನಿವೇಶನ ಕಬಳಿಕೆಗೆ ಯತ್ನಿಸಿರುವುದಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಸೀನ್ ಎಂಬುವರು ಜಮೀರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ಅವರು ನಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು. ಇದನ್ನು ಪ್ರಶ್ನಿಸಿದರೆ ಜಮೀರ್ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು.
ವಾದ-ಪ್ರತಿವಾದ ಆಲಿಸಿದ 7ನೇ ಎಸಿಎಂಎ ನ್ಯಾಯಾಲಯವು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿ ಮೂವರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ.