Home ಟಾಪ್ ಸುದ್ದಿಗಳು ನಾರ್ಕೋಟಿಕ್ ಜಿಹಾದ್ ಹೇಳಿಕೆ: ಕೇರಳ ಬಿಷಪ್ ವಿರುದ್ಧ ಎಫ್ಐಆರ್

ನಾರ್ಕೋಟಿಕ್ ಜಿಹಾದ್ ಹೇಳಿಕೆ: ಕೇರಳ ಬಿಷಪ್ ವಿರುದ್ಧ ಎಫ್ಐಆರ್

► ಬಿಷಪ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

ತಿರುವನಂತಪುರ: ನಾರ್ಕೋಟಿಕ್ ಜಿಹಾದ್ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಧರ್ಮಗಳ ನಡುವೆ ದ್ವೇಷ ಸೃಷ್ಟಿಸಲು ಯತ್ನಿಸಿದ ಆರೋಪದಲ್ಲಿ ಪಾಲ ಬಿಷಪ್ ಜೋಸೆಫ್ ಕಲ್ಲರಂಗಟ್ಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಷಪ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೋಮವಾರ ಕೇರಳ ನ್ಯಾಯಾಲಯವೊಂದು ಪೊಲೀಸರಿಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಎಫ್ ಐಆರ್ ದಾಖಲಾಗಿದೆ.


ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೊಟ್ಟಾಯಂ ಜಿಲ್ಲಾ ನಾಯಕ ಅಬ್ದುಲ್ ಆಬಿದ್ ಮೌಲವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊಟ್ಟಾಯಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಬಿಷಪ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.
ಕ್ಯಾಥೋಲಿಕ್ ಬಿಷಪ್ ವಿರುದ್ಧ ಧರ್ಮ, ಜನಾಂಗ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕೆ ಸಂಬಂಧಿಸಿದ ಸೆಕ್ಷನ್ 153 (A) ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು.


ನ್ಯಾಯಾಲಯದ ಆದೇಶದ ಮೇರೆಗೆ ಕುರವಿಲಂಗಾಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಫ್‌ ಐ ಆರ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ನೋಟಿಸ್ ಪಡೆದ ನಂತರ ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಎಂದು ಬಿಷಪ್ ಡಯಾಸಸ್‌ ನ ವಕ್ತಾರರು ತಿಳಿಸಿದ್ದಾರೆ.


ಎಸ್ ಕೆ ಎಸ್ಎಸ್ಎಫ್ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಈ ನಿರ್ಧಾರವನ್ನು ಸ್ವಾಗತಿಸಿವೆ, ಆದರೆ ರಾಜ್ಯದ ರಾಜಕೀಯ ನಾಯಕರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೆಪ್ಟೆಂಬರ್ 9 ರಂದು ಕೊಟ್ಟಾಯಂ ಚರ್ಚ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಬಿಷಪ್ ಕ್ರಿಶ್ಚಿಯನ್ ಹುಡುಗಿಯರು ಹೆಚ್ಚಾಗಿ ಕೇರಳದಲ್ಲಿ “ಪ್ರೀತಿ ಮತ್ತು ಮಾದಕವಸ್ತು ಜಿಹಾದ್” ಗೆ ಬಲಿಯಾಗುತ್ತಿದ್ದಾರೆ. ಎಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲವೋ ಅಲ್ಲಿ ಉಗ್ರರು ಇತರ ಧರ್ಮಗಳಿಗೆ ಸೇರಿದ ಯುವಕರನ್ನು ನಾಶಮಾಡಲು ಇಂತಹ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿ ಬಿಷಪ್ ಹೇಳಿಕೆ ನೀಡಿದ್ದರು.

ಕೆಥೋಲಿಕ್ ಯುವತಿಯರು ನಾರ್ಕೋಟಿಕ್ ಡ್ರಗ್ಸ್ ನ ಸಂತ್ರಸ್ತರಾಗಿದ್ದಾರೆ. ನಾರ್ಕೋಟಿಕ್ ಜಿಹಾದ್ ಅಸ್ತಿತ್ವದಲ್ಲಿದೆ ಎಂದು ಹೇಳಿಕೆ ನೀಡಿದ್ದರು. ಬಿಷಪ್ ಅವರ ಹೇಳಿಕೆಗೆ ಸ್ವತಃ ಹಲವು ಕ್ರೈಸ್ತ ಮುಖಂಡರು, ಚರ್ಚ ಗಳು ವಿರೋಧ ವ್ಯಕ್ತಪಡಿಸಿದ್ದವು.

Join Whatsapp
Exit mobile version