ಟೊರೊಂಟೊ: ಇತ್ತೀಚಿನ ಕಾಳಿ ಪೋಸ್ಟರ್’ಗೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರಿಗೆ ಆರೆಸ್ಸೆಸ್ ಸಂಘಟನೆ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಸೋಮವಾರ ಮುಂಜಾನೆ ಲೀನಾ ಅವರ ಟ್ವಿಟ್ಟರ್ ಖಾತೆಗೆ ಜೀವ ಬೆದರಿಕೆ ಪೋಸ್ಟ್ ಹಾಕಲಾಗಿದ್ದು, ಈ ಕುರಿತ ಪತ್ರಿಕಾ ಪ್ರತಿಯನ್ನು ಲೀನಾ ಅವರು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರೆಸ್ಸೆಸ್ ಸಂಘಟನೆಯು ನನಗೆ ಟೊರೊಂಟೊದಾದ್ಯಂತ ಜೀವ ಬೆದರಿಕೆಯನ್ನು ಒಡ್ಡುತ್ತಿದೆ. ಎಟೋಬಿಕೋಕ್’ನಿಂದ ಯಾರೋ ನನಗೆ ಈ ಫೋಟೋವನ್ನು ನನ್ನ ಟ್ವಿಟ್ಟರ್ ಖಾತೆಗೆ ಕಳುಹಿಸಿದ್ದಾರೆ ಎಂದು ಲೀನಾ ಅವರು ಟೊರೊಂಟೊ ಪೊಲೀಸರಿಗೆ ತಿಳಿಸಿದ್ದಾರೆ.
ಮಣಿಮೇಕಲೈ ಅಸಹ್ಯಕರ ವರ್ತನೆಯು ಹಿಂದುತ್ವ ಸಿದ್ಧಾಂತವನ್ನು ದೂಷಿಸಿದೆ ಎಂದು ಟೊರೊಂಟೊ ಪೊಲೀಸರಿಗೆ ಟ್ಯಾಗ್ ಮಾಡಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಲೀನಾ ಅವರು ಭಾರತದಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ನೀಡುವುದಿಲ್ಲ ಎಂದು ಆರೆಸ್ಸೆಸ್ ಹೆಸರಿನಲ್ಲಿ ಪತ್ರವನ್ನು ಮುದ್ರಿಸಿ ಟ್ವೀಟ್ ಮಾಡಲಾಗಿದೆ.
ಆರೆಸ್ಸೆಸ್ ಹೆಸರಿನಲ್ಲಿ ಮುದ್ರಿತವಾಗಿರುವ ಈ ಪತ್ರದಲ್ಲಿ ಲೀನಾ ಮಣಿಮೇಕಲೈ ಅವರ ಕುಟುಂಬವು ಲೀನಾ ಅವರ ದುರ್ವತನೆಗಾಗಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸುತ್ತದೆ.
ಈ ವರ್ಷದ ಜುಲೈನಲ್ಲಿ ಲೀನಾ ಮಣಿಮೇಕಲೈ ಅವರ ಕಾಳಿ ಚಿತ್ರದ ಪೋಸ್ಟರ್’ನಲ್ಲಿ ಕಾಳಿ ಮಾತೆಯನ್ನು ಹೋಲುವ ಮಹಿಳೆಯೊಬ್ಬರು ಸಿಗರೇಟು ಸೇದುವ ಮತ್ತು LGBTQ ಸಮುದಾಯವನ್ನು ಪ್ರತಿನಿಧಿಸುವ ಧ್ವಜವನ್ನು ಹಿಡಿದಿರುವ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಟೀಕೆಗೆ ಗುರಿಯಾಗಿದ್ದರು.
ಈ ಪೋಸ್ಟರ್ ಅನ್ನು ಪ್ರಚೋದನಕಾರಿ ಎಂದು ಬಣ್ಣಿಸಿದ ಬಲಪಂಥೀಯ ಸಂಘಟನೆಗಳು, ಲೀನಾ ವಿರುದ್ಧ ಪ್ರಕರಣ ದಾಖಲಿಸಿತ್ತು.