ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ಇದೇ 31ರ ನಂತರ ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಮುಂದಾಗಿದೆ.
2017ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1ರೂ. ಕಮಿಷನ್ ನೀಡಬೇಕೆಂಬುದು ಫೆಡರೇಷನ್ ನ ಪ್ರಮುಖ ಬೇಡಿಕೆಯಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ವಿಧಿಯಲ್ಲದೆ ನಾವು ತೈಲ ಡಿಪೋಗಳಿಂದ ಇಂಧನ ಖರೀದಿ ಮಾಡದೆ ಪ್ರತಿಭಟನೆ ಮಾಡುತ್ತೇವೆ ಎಂದು ಫೆಡರೇಷನ್ ಪ್ರಮುಖ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
2017ರಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಿಗೆ ಹೋಲಿಕೆ ಮಾಡಿದರೆ ದ್ವಿಗುಣವಾಗಿದೆ. ಕಮಿಷನ್ ಹೆಚ್ಚಳ ಮಾಡಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕೆಂಬ ಕಾರಣಕ್ಕಾಗಿಯೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಶೌಚಾಲಯ, ತಿಂಡಿ, ಊಟದ ವ್ಯವಸ್ಥೆ, ಶುಚಿತ ಹೀಗೆ ಎಲ್ಲವನ್ನೂ ನಿರ್ವಹಿಸಬೇಕಾಗಿರುವುದರಿಂದ ಬಂಕ್ ನಡೆಸುವುದೇ ದುಸ್ತರವಾಗಿದೆ ಎಂಬುದು ಮಾಲೀಕರ ಅಳಲು. ನಾವು ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಐದು ವರ್ಷವಾದರೂ ಬೇಡಿಕೆ ಈಡೇರಿಸದ ಕಾರಣ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.