Home ಕ್ರೀಡೆ ಫಿಫಾ ವಿಶ್ವಕಪ್‌ ಪ್ಲೇ-ಆಫ್‌| ಮೂರನೇ ಸ್ಥಾನಕ್ಕಾಗಿ ಮೊರಕ್ಕೊ-ಕ್ರೊವೇಷಿಯಾ ಪೈಪೋಟಿ

ಫಿಫಾ ವಿಶ್ವಕಪ್‌ ಪ್ಲೇ-ಆಫ್‌| ಮೂರನೇ ಸ್ಥಾನಕ್ಕಾಗಿ ಮೊರಕ್ಕೊ-ಕ್ರೊವೇಷಿಯಾ ಪೈಪೋಟಿ

ಫಿಫಾ ವಿಶ್ವಕಪ್‌ ಇತಿಹಾಸದಲ್ಲೇ ಸೆಮಿಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮೊದರ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಗಿರುವ ಮೊರೊಕ್ಕೊ, ಕತಾರ್‌ ವಿಶ್ವಕಪ್‌ನ ಮೂರನೇ ಸ್ಥಾನಿಯರ ನಿರ್ಣಯಕ್ಕಾಗಿ ನಡೆಯುವ ಪಂದ್ಯದಲ್ಲಿ ಕ್ರೊವೇಷಿಯಾ ಸವಾಲನ್ನು ಎದುರಿಸಲಿದೆ.

ಗ್ರೂಪ್‌ ಹಂತದಲ್ಲಿ ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯ ಗೋಲು ಕಾಣದೆ, ಡ್ರಾದಲ್ಲಿ ಅಂತ್ಯವಾಗಿತ್ತು. ವಿಶೇಷ ಎಂಬಂತೆ ಇದೀಗ ಒಂದೇ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಮೊರಕ್ಕೊ-ಕ್ರೊವೇಷಿಯಾ ಮುಖಾಮುಖಿಯಾಗುತ್ತಿದೆ.

ಕಳೆದ ಬಾರಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪ್ರವೇಶಿಸಿ, ಫ್ರಾನ್ಸ್‌ ಎದುರು ಸೋಲು ಕಂಡಿದ್ದ ಕ್ರೊವೇಷಿಯಾ, ಈ ಬಾರಿ ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ 3-0 ಅಂತರದಲ್ಲಿ ಸೋಲು ಕಂಡಿತ್ತು. ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ 8.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ.

ಬೆಲ್ಜಿಯಂ, ಸ್ಪೇನ್‌ ಹಾಗೂ ಪೋರ್ಚುಗಲ್‌ನಂತಹ ಬಲಿಷ್ಠ ತಂಡಗಳನ್ನು ಮಣಿಸಿ ಮೊರಕ್ಕೊ ಸೆಮಿಫೈನಲ್‌ ಪ್ರವೇಶಿಸಿತ್ತು. ವಿಶೇಷವೆಂದರೆ  ಸೆಮಿಫೈನಲ್‌ವರೆಗೂ ಒಂದೇ ಒಂದು ಗೋಲು ಬಿಟ್ಟುಕೊಡದ ಮೊರಕ್ಕೊ, ನಾಲ್ಕರ ಘಟ್ಟ ನಿರ್ಣಾಯಕ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ 2-0 ಅಂತರದಲ್ಲಿ ಮಣಿದಿತ್ತು. ಮತ್ತೊಂದೆಡೆ ದಿಗ್ಗಜ ಮಿಡ್‌ಫೀಲ್ಡರ್, ತಂಡದ ನಾಯಕ ಲೂಕಾ ಮಾಡ್ರಿಚ್‌ ಅವರಿಗೆ ‘ಗೌರವ‘ದ ಬೀಳ್ಕೊಡುಗೆ ನೀಡುವ ತವಕದಲ್ಲಿ ಕ್ರೊವೇಷ್ಯಾ ಆಟಗಾರರಿದ್ದಾರೆ. 37 ವರ್ಷದ ಆಟಗಾರನಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಆಗಿದೆ.

‘ಮಾನಸಿಕವಾಗಿ ಇದೊಂದು ಕಠಿಣ ಸವಾಲು. ಅವಕಾಶ ಸಿಗದ ಆಟಗಾರರನ್ನು ಪಂದ್ಯದಲ್ಲಿ ಆಡಿಸಲಾಗುವುದು. ನಾವು ಮೂರನೇ ಸ್ಥಾನ ಪಡೆಯುವ ವಿಶ್ವಾಸವಿದೆ‘ ಎಂದು ಮೊರೊಕ್ಕೊ ಕೋಚ್‌ ವಾಲಿದ್‌ ರೆಗ್ರಾಗ್‌ ಹೇಳಿದ್ದಾರೆ.

ಕತಾರ್‌ನ ಅಬ್ದುಲ್‌ರಹಮಾನ್‌ ಅಲ್‌ ಜಾಸಿಮ್‌ ಅವರು ಕ್ರೊವೇಷ್ಯಾ–ಮೊರೊಕ್ಕೊ ನಡುವಣ ಮೂರನೇ ಸ್ಥಾನದ ಪ್ಲೇ ಆಫ್‌ಪಂದ್ಯದ  ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕತಾರ್‌ನವರೇ ಆದ ತಾಲೆಬ್ ಅಲ್ ಮ್ಯಾರಿ ಮತ್ತು ಸವೋದ್‌ ಅಹಮದ್‌ ಅಲ್ಮಾಕಲೆಹ್  ಲೈನ್‌ ರೆಫರಿಗಳಾಗಲಿದ್ದಾರೆ.

Join Whatsapp
Exit mobile version