ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಹೋರಾಟಗಳಿಗೆ ಶುಕ್ರವಾರ ತೆರೆಬೀಳಲಿದೆ. 32 ತಂಡಗಳ ಪೈಕಿ 16ರ ಘಟ್ಟಕ್ಕೆ ಈಗಾಗಲೇ 14 ತಂಡಗಳು ಪ್ರವೇಶ ಪಡೆದಿವೆ. ಶುಕ್ರವಾರ ರಾತ್ರಿ ನಡೆಯುವ 4 ಪಂದ್ಯಗಳ ಬಳಿಕ ಉಳಿದ 2 ಸ್ಥಾನಗಳ ವಿಜೇತರ ನಿರ್ಧಾರವಾಗಲಿದೆ. ವಿಶೇಷವೆಂದರೆ 2 ಸ್ಥಾನಗಳಿಗಾಗಿ 6 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಗುಂಪು ಹಂತದ ಅಂತಿಮ ದಿನದ ಹಣಾಹಣಿಯಲ್ಲಿ ಗ್ರೂಪ್ G ಮತ್ತು Hನಲ್ಲಿರುವ 8 ತಂಡಗಳು ಮೈದಾನಕ್ಕಿಳಿಯಲಿವೆ. ಇವರಲ್ಲಿ ಗ್ರೂಪ್ G ಯಿಂದ ಬ್ರೆಜಿಲ್ ಮತ್ತು ಮತ್ತು Hನಿಂದ ಪೋರ್ಚುಗಲ್ ಈಗಾಗಲೇ ನಾಕೌಟ್ ಹಂತ ಪ್ರವೇಶಿಸಿದೆ. ಉಳಿದಂತೆ ಉರುಗ್ವೆ, ಘಾನ, ದಕ್ಷಿಣ ಕೊರಿಯಾ, ಹಾಗೂ ಸರ್ಬಿಯಾ, ಸ್ವಿಝರ್‌ಲ್ಯಾಂಡ್, ಕ್ಯಾಮರೂನ್ ತಂಡಗಳಿಗೆ ನಾಕೌಟ್ ಹಂತದ ಅವಕಾಶ ಮುಕ್ತವಾಗಿದೆ.
ಗುಂಪು Hನ ಲೆಕ್ಕಾಚಾರ
ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ಈಗಾಗಲೇ ನಾಕೌಟ್ ಹಂತ ಪ್ರವೇಶಿಸಿದೆ. H ಗುಂಪಿನಿಂದ ಇನ್ನೊಂದು ಸ್ಥಾನಕ್ಕಾಗಿ ಮೂರು ತಂಡಗಳು ಸ್ಪರ್ಧೆಯಲ್ಲಿವೆ.
ಘಾನಾ: ಉರುಗ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಘಾನಾಗೆ ಗೆಲುವಿನ ಅಗತ್ಯವಿದೆ. ತಮ್ಮ ಗೆಲುವಿನ ಜೊತೆಗೆ ಪೋರ್ಚುಗಲ್ ವಿರುದ್ಧ ದಕ್ಷಿಣ ಕೊರಿಯಾ ಸೋಲುವುದನ್ನು ಘಾನಾ ಅಭಿಮಾನಿಗಳು ಕಾಯುತ್ತಿದ್ದಾರೆ.
ದಕ್ಷಿಣ ಕೊರಿಯಾ: ಅಂಕ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಅಂತಿಮ ಸ್ಥಾನದಲ್ಲಿದೆ. ಪೋರ್ಚುಗಲ್ ವಿರುದ್ಧದ ಗೆಲುವಿನ ಹೊರತಾದ ಯಾವುದೇ ಫಲಿತಾಂಶವೂ ಕೊರಿಯ ಕೈ ಹಿಡಿಯಲಾರದು.
ಉರುಗ್ವೆ: ಆಡಿರುವ 2 ಪಂದ್ಯಗಳಲ್ಲಿ ಗೋಲಿನ ಖಾತೆ ತೆರೆಯಲು ವಿಫಲವಾಗಿರುವ ಉರುಗ್ವೆ, ತಲಾ 1 ಸೋಲು ಮತ್ತು ಡ್ರಾದ ಮೂಲಕ ಕೇವಲ 1 ಅಂಕ ಹೊಂದಿದೆ. ಅದಾಗಿಯೂ ಕೊನೆಯ ಪಂದ್ಯದಲ್ಲಿ ಘಾನಾ ವಿರುದ್ಧ ಗೆದ್ದರೆ ನಾಕೌಟ್ ಸಾಧ್ಯತೆಯಿದೆ.
ಗುಂಪು G ಲೆಕ್ಕಾಚಾರ
2 ಪಂದ್ಯಗಳಲ್ಲಿ ಗೆಲುವಿನ ಮೂಲಕ 6 ಅಂಕಗಳೊಂದಿಗೆ ಬ್ರೆಜಿಲ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಉಳಿದಂತೆ ಸ್ವಿಝರ್‌ಲ್ಯಾಂಡ್ 3 ಮತ್ತು ಸರ್ಬಿಯಾ, ಕ್ಯಾಮರೂನ್ ತಂಡಗಳು ತಲಾ 1 ಅಂಕವನ್ನು ಹೊಂದಿದೆ.
ಶುಕ್ರವಾರದ ವೇಳಾಪಟ್ಟಿ
ಗುಂಪು H: ಘಾನಾ vs ಉರುಗ್ವೆ | ರಾತ್ರಿ 8:30 | ಅಲ್ ಜನೌಬ್ ಸ್ಟೇಡಿಯಂ
ಗುಂಪು H: ದಕ್ಷಿಣ ಕೊರಿಯಾ vs ಪೋರ್ಚುಗಲ್ | ರಾತ್ರಿ 8:30 | ಎಜುಕೇಶನ್ ಸಿಟಿ ಸ್ಟೇಡಿಯಂ
ಗುಂಪು G: ಸೆರ್ಬಿಯಾ vs ಸ್ವಿಝರ್‌ಲ್ಯಾಂಡ್ | ತಡರಾತ್ರಿ 12:30 | ಲುಸೈಲ್ ಸ್ಟೇಡಿಯಂ
ಗುಂಪು G: ಕ್ಯಾಮರೂನ್ vs ಬ್ರೆಜಿಲ್ | ತಡರಾತ್ರಿ 12:30 AM | ಸ್ಟೇಡಿಯಂ 974