Home ಕ್ರೀಡೆ ಫಿಫಾ ವಿಶ್ವಕಪ್‌ | ಕತಾರ್‌ನಲ್ಲಿ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ!

ಫಿಫಾ ವಿಶ್ವಕಪ್‌ | ಕತಾರ್‌ನಲ್ಲಿ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ!

ದೋಹಾ: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್‌ ಮಹಾಸಂಗಮಕ್ಕೆ ಕೌಂಟ್‌ ಡೌನ್‌ ಆರಂಭವಾಗಿದೆ. ಗಲ್ಫ್‌ನ ಪುಟ್ಟ ಶ್ರೀಮಂತ ರಾಷ್ಟ್ರ ಕತಾರ್‌ನಲ್ಲಿ ಭಾನುವಾರ (ನವೆಂಬರ್‌ 20) ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ.

206 ರಾಷ್ಟ್ರಗಳ ನಡುವೆ ನಡೆದ 865 ಅರ್ಹತಾ ಸುತ್ತಿನ ಪಂದ್ಯಗಳ ಬಳಿಕ ಅಂತಿಮವಾಗಿ 32 ತಂಡಗಳು ಪ್ರತಿಷ್ಠಿತ ಟೂರ್ನಿಯ ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಿದೆ.  32 ತಂಡಗಳನ್ನು 8 ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನಲ್ಲೂ 4 ತಂಡಗಳಿವೆ.   ನವೆಂಬರ್‌ 20ಕ್ಕೆ ಆರಂಭವಾಗುವ ಗುಂಪು ಹಂತದ ಪಂದ್ಯಗಳು ಡಿಸೆಂಬರ್‌ 2ಕ್ಕೆ ಕೊನೆಗೊಳ್ಳಲಿದೆ. ಆಯಾ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತ ಪ್ರವೇಶಿಸಲಿವೆ

ನಾಕೌಟ್‌ (ಪ್ರಿ ಕ್ವಾರ್ಟರ್‌) ಹಂತ (16 ತಂಡ 8 ಪಂದ್ಯ) ಡಿಸೆಂಬರ್‌ 3ರಿಂದ, ಕ್ವಾರ್ಟರ್‌ ಫೈನಲ್‌ (8 ತಂಡ 4 ಪಂದ್ಯ ) ಡಿಸೆಂಬರ್‌ 9,10 ಹಾಗೂ 11ರಂದು, 2 ಸೆಮಿಫೈನಲ್‌ ಡಿ.14 ಮತ್ತು 15 ಹಾಗೂ ಡಿಸೆಂಬರ್‌ 18ರಂದು ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಅಂತಿಮ ಹಣಾಹಣಿ ನಡೆಯಲಿದೆ.

ನವೆಂಬರ್‌ 20 ರಂದು ಕತಾರ್‌ನ ರಾಜಧಾನಿ ದೋಹಾದ ಅಲ್‌ಬೈತ್‌ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್‌, ಈಕ್ವೆಡಾರ್ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಆರಂಭವಾಗಲಿದೆ.

ಲೀಗ್‌ ಹಂತದಲ್ಲಿ ಮೊದಲ ದಿನ 1 ಮತ್ತು 2ನೇ ದಿನ ಎರಡು ಪಂದ್ಯಗಳು ನಡೆಯಲಿದೆ. ಆ ಬಳಿಕ ಪ್ರತಿನಿತ್ಯ 4 ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳು ಕ್ರಮವಾಗಿ ಭಾರತೀಯ ಕಾಲಮಾನ  ಮಧ್ಯರಾತ್ರಿ 12.30, ಮಧ್ಯಾಹ್ನ 3.30, ಸಂಜೆ 6.30 ಹಾಗೂ ರಾತ್ರಿ 9.30ಕ್ಕೆ ನಡೆಯಲಿದೆ.

ಸಾಮಾನ್ಯವಾಗಿ ಫುಟ್‌ಬಾಲ್‌ ಪಂದ್ಯಗಳನ್ನು ಯುರೋಪಿಯನ್‌ ರಾಷ್ಟ್ರಗಳ ವೀಕ್ಷಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಸಮಯವನ್ನು ನಿಗದಿಪಡಿಸಲಾಗುತ್ತದೆ. ಆದರೆ ಕತಾರ್‌ನಲ್ಲಿ ನಡೆಯುವ ಪಂದ್ಯಗಳ ವೇಳಾಪಟ್ಟಿಯು ಭಾರತೀಯರಿಗೆ ಅತ್ಯಂತ ಅನುಕೂಲಕರವಾಗಿದೆ.  ಕತಾರ್‌ ವಿಶ್ವಕಪ್‌ ಟೂರ್ನಿಯ ಪಂದ್ಯಗಳು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಜಿಯೊ ಸಿನಿಮಾ ಒಟಿಟಿಯಲ್ಲೂ ನೇರ ಪ್ರಸಾರ ಕಾಣಲಿದ್ದು, ಇಂಗ್ಲಿಷ್‌, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಪ್ರಸಾರವಾಗಲಿದೆ.

Join Whatsapp
Exit mobile version