ಫಿಫಾ ವಿಶ್ವಕಪ್‌ ಫೈನಲ್‌| ಕಿಲಿಯನ್‌ ಎಂಬಾಪೆಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿ

Prasthutha|

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟಿನ,  3ನೇ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

- Advertisement -

ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳಿಂದ 8 ಗೋಲು ಗಳಿಸಿದ ಎಂಬಾಪೆ, ಮೆಸ್ಸಿಯನ್ನು ಹಿಂದಿಕ್ಕಿ (7 ಗೋಲು) ಗೋಲ್ಡನ್‌ ಬೂಟ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 2018 ರಲ್ಲಿ ರಷ್ಯಾದಲ್ಲಿ, ತನ್ನ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿ ಎಂಬಾಪೆ 4 ಗೋಲು ಗಳಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಇದೀಗ ಎರಡು ವಿಶ್ವಕಪ್‌ ಕೂಟಗಳಲ್ಲಿ ಒಟ್ಟು 12 ಗೋಲು ಗಳಿಸಿದ ಎಂಬಾಪೆ, ಸರ್ವಾಧಿಕ ಗೋಲು ಗಳಿಸಿದವರ ಪಟ್ಟಿಯಲ್ಲಿ , ಫುಟ್‌ಬಾಲ್‌ ದಿಗ್ಗಜ ಬ್ರೆಜಿಲ್‌ನ ಪಿಲೆ ಜೊತೆ ಸಮಬಲ ಸಾಧಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲೇ ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಎಂಬಾಪೆ ಪಾತ್ರರಾಗಿದ್ದಾರೆ. 1966ರಲ್ಲಿ ಪಶ್ಚಿಮ ಜರ್ಮನಿ ವಿರುದ್ಧದ ಫೈನಲ್‌ನಲ್ಲಿ, ಆತಿಥೇಯ ಇಂಗ್ಲೆಂಡ್‌ ತಂಡದ ಜಿಯೋಫ್ ಹರ್ಸ್ಟ್,  ವಿಶ್ವಕಪ್‌ನ ಫೈನಲ್‌ನಲ್ಲಿ ಮೊದಲ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ವಿಶ್ವಕಪ್‌ ಕೂಟಗಳಲ್ಲಿ 10 ಗೋಲು ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಬಿರುದು ಸಹ ಎಂಬಾಪೆ ಪಾಲಾಗಿದೆ.

- Advertisement -

ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಿದ ಎಂಬಾಪೆ !

ಪಂದ್ಯದ ಮೊದಲಾರ್ಧದಲ್ಲಿ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಅರ್ಜೆಂಟಿನಾ, ಸುಲಭ ಗೆಲುವಿನೆಡೆಗೆ ಮುಂದಡಿ ಇಟ್ಟಿತ್ತು. ಆದರೆ ದ್ವಿತಿಯಾರ್ಧದಲ್ಲಿ 2 ನಿಮಿಷಗಳ ಅಂತರದಲ್ಲಿ 2 ಗೋಲು ಗಳಿಸಿದ ಫ್ರಾನ್ಸ್‌ನ ಯುವ ತಾರಾ ಆಟಗಾರ ಕಿಲಿಯನ್‌ ಎಂಬಾಪೆ, ಪಂದ್ಯದ ಗತಿ ಬದಲಾಯಿಸಿದರು. 79 ನೇ ನಿಮಿಷದಲ್ಲಿ ಪೆನಾಲ್ಟಿ ಮತ್ತು 80ನೇ ನಿಮಿಷದಲ್ಲಿ ಮಾರ್ಕಸ್ ಥುರಾಮ್ ನೀಡಿದ ಪಾಸ್‌ ಪಡೆದ ಎಂಬಾಪೆ, ಗೋಲು ಬಲೆಯ ಬಲಭಾಗದಂಚಿನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಪಂದ್ಯದ ಸಂಪೂರ್ಣ ಚಿತ್ರವೇ ಬದಲಾಗಿ ಹೋಗಿತ್ತು.

ನಿಗಧಿತ ಅವಧಿ 2-2ರಲ್ಲಿ ಕೊನೆಗೊಂಡಿತು. ಪಂದ್ಯ ಹೆಚ್ಚುವರಿ ಅವಧಿಗೆ ಮುಂದೂಡಲ್ಪಟ್ಟಿತು. 30 ನಿಮಿಷಗಳ ಆಟದ ದ್ವಿತಿಯಾರ್ಧದ 18ನೇ ನಿಮಿಷದಲ್ಲಿ ಮೆಸ್ಸಿ ಗೋಲಿನ ಮೂಲಕ ಮತ್ತೆ ಅರ್ಜೆಂಟಿನಾ ಮುನ್ನಡೆ ಸಾಧಿಸಿತು. ಆದರೆ ಪಂದ್ಯ ಮುಗಿಯಲು ಇನ್ನೇ ಕೇವಲ 2 ನಿಮಿಷಗಳಷ್ಟೇ ಬಾಕಿ ಇದ್ದ ವೇಳೆ ಲಭಿಸಿದ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಎಂಬಾಪೆ, ತಮ್ಮ ಹ್ಯಾಟ್ರಿಕ್‌ ಪೂರ್ಣಗೊಳಿಸುವುದರ ಜೊತೆಗೆ ಮತ್ತೊಮ್ಮೆ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದ್ದರು.

ಅಂತಿಮವಾಗಿ ವಿಜೇತರ ನಿರ್ಣಯಕ್ಕಾಗಿ ನೀಡಲಾದ ಪೆನಾಲ್ಟಿಯಲ್ಲೂ ಮೊದಲ ಅವಕಾಶವನ್ನೇ  ಎಂಬಾಪೆ, ಸುಲಭವಾಗಿ ಗುರಿ ಮುಟ್ಟಿದರು. ಆ ಮೂಲಕ ಪಂದ್ಯದಲ್ಲಿ ಒಟ್ಟು 4 ಗೋಲುಗಳನ್ನು ಬಾರಿಸಿ ಎಂಬಾಪೆ ಅಬ್ಬರಿಸಿದ್ದರು. ಅದಾಗಿಯೂ ತಂಡ ತನ್ನ ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

Join Whatsapp
Exit mobile version