ಫಿಫಾ ವಿಶ್ವಕಪ್‌ | ಆಸ್ಟ್ರೇಲಿಯಾವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಅರ್ಜೆಂಟೀನಾ 

Prasthutha|

 ಪುಟ್‌ಬಾಲ್‌ ಮಾಂತ್ರಿಕ ಲಿಯೋನೆಲ್‌ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ಪೈನಲ್‌ ಪ್ರವೇಶಿಸಿದೆ. ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂನಲಿ ನಡೆದ 16 ಘಟ್ಟದ ಜಿದ್ದಾಜಿದ್ದಿನ  ಪಂದ್ಯದಲ್ಲಿ ಆರ್ಜೆಂಟೀನಾ, ಆಸ್ಟ್ರೇಲಿಯಾ ತಂಡವನ್ನು 2-1 ಗೋಲುಗಳ ಅಂತರದಲ್ಲಿ ರೋಚಕವಾಗಿ ಮಣಿಸಿತು.

- Advertisement -

ಮೊದಲಾರ್ಧದಲ್ಲಿ ಅರ್ಜೆಂಟೀನಾ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು. 35ನೇ ನಿಮಿಷದಲ್ಲಿ ನಾಯಕ ಲಿಯೋನೆಲ್‌ ಮೆಸ್ಸಿಯ ಅಮೋಘ ಗೋಲ್‌, ನೀಲಿ ಪಡೆಯ ಪಾಳಯದಲ್ಲಿ ಸಂಭ್ರಮದ ಅಲೆ ಉಕ್ಕಿಸಿತ್ತು.  ಆದರೆ ದ್ವಿತಿಯಾರ್ಧದಲ್ಲಿ ಪಂದ್ಯದ ಸಂಪೂರ್ಣ ಚಿತ್ರಣವೇ ಬದಲಾಯಿತು. ಆಸ್ಟ್ರೇಲಿಯಾ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿತು. ಅರ್ಜೆಂಟೀನಾ ತಂಡದ ಹಲವು ಅವಕಾಶಗಳಿಗೆ ತಡೆ ಒಡ್ಡಿತು. ಗೋಲು ಬಲೆಯನ್ನು ಗುರಿಯಾಗಿಸಿ ನಿರಂತರ ಪ್ರೆಸ್ಸಿಂಗ್‌ ನಡೆಸಿತು.

ಗೋಲ್‌ ಕೀಪರ್‌ ಅಚಾತುರ್ಯ !

- Advertisement -

ಕೇವಲ 1 ಗೋಲಿನ ಮುನ್ನಡೆಯಲ್ಲಿದ್ದ ಅರ್ಜೆಂಟೀನಾ ತಂಡಕ್ಕೆ ಆಸ್ಟ್ರೇಲಿಯಾದ ಗೋಲ್‌ ಕೀಪರ್‌ ಮ್ಯಾಟ್‌ ರಯಾನ್‌ ಅವರ ನಿರ್ಲ್ಯಕ್ಷದ ಪಾಸ್‌ ಒಂದು ಸುಲಭ ಗೋಲಿನ ಅವಕಾಶ ಸೃಷ್ಟಿಸಿತು. 57ನೇ ನಿಮಿಷದಲ್ಲಿ ತನ್ನ ತಂಡದ ಆಟಗಾರರಿಗೆ ಪಾಸ್‌ ನೀಡಲು ವಿಳಂಬ ಮಾಡಿದ ಅವಕಾಶವನ್ನೇ ಬಳಸಿಕೊಂಡ ಎದುರಾಳಿ ತಂಡದ ಅಲ್ವಾರೆಝ್‌, ರಯಾನ್‌ ಕಾಲಿನಿಂದ ಚೆಂಡನ್ನು ಪಡೆದು ಗೋಲು ಬಲೆಯ ಸಮೀಪದಿಂದಲೇ ಗುರಿ ಸೇರಿಸಿದರು.

ಮತ್ತೊಂದೆಡೆ 77ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಕ್ರೆಗ್‌ ಗುಡ್‌ವಿನ್‌ ಡಿಬಾಕ್ಸ್‌ ಹೊರಭಾಗದಿಂದ ಎಡಗಾಲಿನಿಂದ ಬಲವಾಗಿ ಒದ್ದ ಚೆಂಡು, ಅರ್ಜೆಂಟೀನಾದ ಎನ್ಝೋ ಫೆರ್ನಾಂಡಿಸ್‌ ಅವರ ಕಾಲಿಗೆ ತಾಗಿ ಗೋಲು ಬಲೆಯೊಳಗೆ ನುಗ್ಗಿತ್ತು.  ಆದರೆ ಈ ಸೆಲ್ಫ್‌ ಗೋಲ್‌ನ ಪ್ರಯೋಜನ ಪಡೆದುಕೊಳ್ಳಲು ಪಂದ್ಯದ ನಂತರದ  ನಿಮಿಷಗಳಲ್ಲಿ ಆಸೀಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ 90+7 ನಿಮಿಷಗಳ ಪಂದ್ಯದಲ್ಲಿ ಅರ್ಜೆಂಟೀನಾ 2-1 ಗೋಲುಗಳ ಜಯದ ನಿಟ್ಟುಸಿರು ಬಿಟ್ಟಿತು.

Join Whatsapp