ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿಂದು ದಿಗ್ಗಜರ ಕದನ| ಮೊದಲ ಸವಾಲಿಗೆ ಸಜ್ಜಾದ ರೊನಾಲ್ಡೊ, ನೇಮರ್‌

Prasthutha|

ಅಚ್ಚರಿಯ ಫಲಿತಾಂಶಗಳ ಮೂಲಕವೇ ಸುದ್ದಿಯಾದ ಕತಾರ್‌ ಫಿಫಾ ವಿಶ್ವಕಪ್‌ನಲ್ಲಿ ಗುರುವಾರ, ಫುಟ್‌ಬಾಲ್‌ ಲೋಕದ ದಿಗ್ಗಜ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಟೂರ್ನಿಯ 5ನೇ ದಿನ 4 ಪಂದ್ಯಗಳು ನಡೆಯಲಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ನೇಮರ್‌ ಜೂನಿಯರ್‌ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

- Advertisement -

ಮಧ್ಯಾಹ್ನ 3.30ಕ್ಕೆ ಅಲ್‌ ಜನೌಬ್‌ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಸ್ವಿಝರ್‌ಲ್ಯಾಂಡ್‌ –ಕ್ಯಾಮರೂನ್‌ ಮುಖಾಮುಖಿಯಾಗಲಿದೆ. ಸಂಜೆ 6.30ಕ್ಕೆ ಉರುಗ್ವೆ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯವು ಎಜುಕೇಶನ್‌ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫುಟ್‌ಬಾಲ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಎರಡು ಪಂದ್ಯಗಳು ರಾತ್ರಿ ನಡೆಯಲಿದೆ.

ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮುನ್ನಡೆಸುತ್ತಿರುವ ಪೋರ್ಚುಗಲ್‌, ಆಫ್ರಿಕನ್‌ ಫುಟ್‌ಬಾಲ್‌ ಶಕ್ತಿ ಘಾನಾ ನಡುವಿನ ಪಂದ್ಯವು ಸ್ಟೇಡಿಯಂ 974ನಲ್ಲಿ ರಾತ್ರಿ 9.30ಕ್ಕೆ ಪ್ರಾರಂಭವಾಗಲಿದೆ. ಫಿಫಾ ವಿಶ್ವಕಪ್‌ ಫುಟ್‌ಬಾಲ್‌ನ ಅತ್ಯಂತ ಯಶಸ್ವಿ ತಂಡ ಬ್ರೆಝಿಲ್‌, ಮಧ್ಯರಾತ್ರಿ 12.30ಕ್ಕೆ ನಡೆಯುವ ಪಂದ್ಯದಲ್ಲಿ ಸರ್ಬಿಯಾ ಸವಾಲನ್ನು ಎದುರಿಸಲಿದೆ.

- Advertisement -

ವೃತ್ತಿ ಜೀವನದ 5ನೇ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿರುವ 37 ವರ್ಷದ ರೊನಾಲ್ಡೊ, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಜೊತೆಗಿನ ವಿವಾದದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಹೆಗ್ಗಳಿಕೆಯೂ ರೊನಾಲ್ಡೊ ಹೆಸರಿನಲ್ಲಿದೆ. ಈ ಹಿನ್ನಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರತಿಷ್ಠಿತ ಟೂರ್ನಿಯಲ್ಲಿ ನಿರೂಪಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಡಿಫೆನ್ಸ್‌ನಲ್ಲಿ ರೂಬೆನ್‌ ಡಯಾಸ್‌ ಮತ್ತು ಮದ್ಯ ಭಾಗದಲ್ಲಿ ಜುವಾನ್‌ ಕನ್ಸೆಲ್ಲೋ ಪೋರ್ಚುಗಲ್‌ನ ಶಕ್ತಿಯಾಗಿದ್ದಾರೆ. ಮತ್ತೊಂದೆಡೆ ಥಾಮಸ್‌ ಮತ್ತು ಮುಹಮ್ಮದ್‌ ಕುದೂಸ್‌ ಘಾನಾ ಹೋರಾಟಕ್ಕೆ ಬಲ ತುಂಬಲಿದ್ದಾರೆ.

Join Whatsapp