Home ಕ್ರೀಡೆ ಕತಾರ್ ಫಿಫಾ ವಿಶ್ವಕಪ್ | ದೆಹಲಿಯಿಂದ ದೋಹಾಗೆ ತೆರಳಲು ಖಾಸಗಿ ಜೆಟ್‌ ವಿಮಾನಗಳಿಗೆ ಭಾರಿ ಬೇಡಿಕೆ

ಕತಾರ್ ಫಿಫಾ ವಿಶ್ವಕಪ್ | ದೆಹಲಿಯಿಂದ ದೋಹಾಗೆ ತೆರಳಲು ಖಾಸಗಿ ಜೆಟ್‌ ವಿಮಾನಗಳಿಗೆ ಭಾರಿ ಬೇಡಿಕೆ

ಪ್ರತಿಷ್ಠಿತ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯು ನವೆಂಬರ್ 20ರಿಂದ ಕತಾರ್‌ನಲ್ಲಿ ಆರಂಭವಾಗಲಿದೆ. 4 ವರ್ಷಗಳಿಗೊಮ್ಮೆ ನಡೆಯುವ ಮಹಾಕೂಟದಲ್ಲಿ ಈ ಬಾರಿ 32 ರಾಷ್ಟ್ರಗಳು ಭಾಗವಹಿಸಲಿದ್ದು, ಒಟ್ಟು 64 ಪಂದ್ಯಗಳು ನಡೆಯಲಿವೆ.

ಡಿಸೆಂಬರ್‌ 18ವರೆಗೆ ನಡೆಯಲಿರುವ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ವಿವಿಧ ರಾಷ್ಟ್ರಗಳಿಂದ 1.2 ಮಿಲಿಯನ್‌ಗಿಂತಲೂ ಅಧಿಕ ಮಂದಿ ಕತಾರ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ.

ಕತಾರ್‌ ವಿಶ್ವಕಪ್‌ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಭಾರತದಲ್ಲೂ ಫುಟ್‌ಬಾಲ್‌ ಜ್ವರ ಏರುತ್ತಿದೆ. ದೇಶದ ಆಗರ್ಭ ಶ್ರೀಮಂತರು ಫುಟ್‌ಬಾಲ್‌ ಪಂದ್ಯಗಳನ್ನು ವೀಕ್ಷಿಸಲು ಕತಾರ್‌ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಚಾರ್ಟರ್ಡ್ ಫ್ಲೈಟ್‌ಗಳನ್ನು ಬುಕ್‌ ಮಾಡುತ್ತಿದ್ದಾರೆ. ಆದರೆ ವಿಶ್ವಕಪ್‌ ಸಮೀಪಿಸುತ್ತಿದ್ದಂತೆಯೇ, ಭಾರತದಲ್ಲಿ ಖಾಸಗಿ ಜೆಟ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ದರ ಎಷ್ಟಾದರೂ ಚಾರ್ಟರ್ಡ್ ಫ್ಲೈಟ್‌ಗಾಗಿ ಅತಿ ಸಿರಿವಂತರು ಹಠ ಹಿಡಿದಿದ್ದಾರೆ.

ಮಾರುಕಟ್ಟೆಯಲ್ಲಿ ಖಾಸಗಿ ಜೆಟ್‌ಗಳಿಗೆ ಸೃಷ್ಟಿಯಾಗಿರುವ ಭಾರಿ ಬೇಡಿಕೆ ಕುರಿತು, ಭಾರತದಲ್ಲಿ ಚಾರ್ಟರ್ಡ್ ಫ್ಲೈಟ್‌ ಸೇವೆಗಳನ್ನು ಒದಗಿಸುವ ಪ್ರಮುಖ ಕಂಪನಿ, ದೆಹಲಿ ಮೂಲದ ಇನ್‌ಸ್ಟಾ ಚಾರ್ಟರ್‌ ಸ್ಥಾಪಕ ಕ್ಯಾಪ್ಟನ್‌ ಅಭಿಷೇಕ್‌ ಸಿನ್ಹಾ, ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ್ದಾರೆ.

“ಲಭ್ಯವಿರುವ ಚಾರ್ಟರ್ಡ್ ಫ್ಲೈಟ್‌ಗಳೆಲ್ಲವೂ ಈಗಾಗಲೇ ಬುಕ್‌ ಆಗಿವೆ. ಆದರೂ ಮತ್ತಷ್ಟು ಖಾಸಗಿ ಜೆಟ್‌ಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ದೆಹಲಿ ಮತ್ತು ಮುಂಬೈನಿಂದ 30 ಮಂದಿ ಕುಳಿತು ಪ್ರಯಾಣಿಸಬಹುದಾದ ಖಾಸಗಿ ಜೆಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬುಕ್‌ ಆಗಿದೆ. ದೆಹಲಿಯಿಂದ ಕತಾರ್‌ ರಾಜಧಾನಿ ದೋಹಾಗೆ ಸುಮಾರು 5 ಗಂಟೆಗಳ ಪ್ರಯಾಣವಿದೆ. ಅಲ್ಲಿ ಒಂದು ಪಂದ್ಯ ವೀಕ್ಷಿಸಿ (90 ನಿಮಿಷ) ಅದೇ ವಿಮಾನದಲ್ಲಿ ಗಣ್ಯರು ಭಾರತಕ್ಕೆ ಮರಳಿಲಿದ್ದಾರೆ. ಈ ಪ್ರಯಾಣಕ್ಕೆ 50ರಿಂದ 60 ಲಕ್ಷ ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹೆಚ್ಚುವರಿಯಾಗಿ ತೆರಿಗೆಯನ್ನು ಪಾವತಿಸಬೇಕಾಗಿದೆ. ಅದಾಗಿಯೂ ದರದ ಕುರಿತು ಭಾರತೀಯ ಶ್ರೀಮಂತರು ತಲೆಕೆಡಿಸಿಕೊಂಡಿಲ್ಲ. ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಕೆಲ ದಿನಗಳಲ್ಲೇ ಈಗ ನಿಗದಿಪಡಿಸಲಾಗಿರುವ ದರವು 40ರಿಂದ 50 ಪಟ್ಟು ಹೆಚ್ಚಾಗುವ ಸಂಭವ ಇದೆ” ಎಂದು ಕ್ಯಾಪ್ಟನ್‌ ಅಭಿಷೇಕ್‌ ಸಿನ್ಹಾ ಹೇಳಿದ್ದಾರೆ.

ಜಗತ್ತಿನ ಬಹುತೇಕ ರಾಷ್ಟ್ರಗಳಿಂದ ಫುಟ್‌ಬಾಲ್‌ ಅಭಿಮಾನಿಗಳು ಕತಾರ್‌ಗೆ ಆಗಮಿಸುತ್ತಿದ್ದಾರೆ. ದೋಹಾದ ಎಲ್ಲಾ ಹೊಟೇಲ್‌ಗಳು ಭರ್ತಿಯಾಗಿದೆ. ಹೀಗಾಗಿ ಗಣ್ಯರಿಗೆ ಅಲ್ಲಿ ಉಳಿಯುವುದು ಸಮಸ್ಯೆಯಾಗಿದೆ. ಈ ಕಾರಣದಿಂದ ಅದೇ ದಿನ ಮರಳಲು ಖಾಸಗಿ ವಿಮಾನದ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು 40 ವರ್ಷ ಪ್ರಾಯದ ಒಳಗಿನವರು ಎಂದು ಸಿನ್ಹಾ ಹೇಳಿದ್ದಾರೆ.

ಭಾರತದ ಖ್ಯಾತನಾಮರೆಲ್ಲರೂ ಕತಾರ್‌ನಲ್ಲಿ ನಡೆಯಲಿರುವ ಫುಟ್‌ಬಾಲ್‌ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಖಾಸಗಿ ಜೆಟ್‌ಗಳಲ್ಲಿ ತೆರಳುತ್ತಿದ್ದಾರೆ. ಆದರೆ ನಮ್ಮ ಗೌಪ್ಯತೆ ನೀತಿಯ ಪ್ರಕಾರ ಗ್ರಾಹಕರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕ್ಯಾಪ್ಟನ್‌ ಸಿನ್ಹಾ ಹೇಳಿದ್ದಾರೆ.

ದೋಹಾಗೆ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಾಗುತ್ತಿರುವ ಬೇಡಿಕೆ ಮನಗಂಡು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಭಾರತದ ಪ್ರಮುಖ ನಗರಗಳಾದ ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಿಂದ ಕತಾರ್‌ಗೆ ಹೆಚ್ಚುವರಿಯಾಗಿ 20 ಹೊಸ ವಿಮಾನ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಯೋಜನೆಯಾಗಿದೆ. ಮತ್ತೊಂದೆಡೆ ಫುಟ್‌ಬಾಲ್‌ ಜಗತ್ತಿನ ಮಾಂತ್ರಿಕ ಆಟಗಾರ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ “ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ನನ್ನ ಕೊನೆಯ ವಿಶ್ವಕಪ್‌ ಆಗಿರಲಿದೆ” ಎಂದು ಈಗಾಗಲೇ ಘೋಷಿಸಿರುವುದು ದೋಹಾದೆಡೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬರಲು ಕಾರಣವಾಗಿದೆ.

Join Whatsapp
Exit mobile version