Home ಕ್ರೀಡೆ ಕೋಸ್ಟರಿಕಾ- ಜರ್ಮನಿ ಪಂದ್ಯವನ್ನು ನಿಯಂತ್ರಿಸಲಿರುವ ಮಹಿಳಾ ರೆಫ್ರಿಗಳು; ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಫಿಫಾ ವಿಶ್ವಕಪ್‌ 

ಕೋಸ್ಟರಿಕಾ- ಜರ್ಮನಿ ಪಂದ್ಯವನ್ನು ನಿಯಂತ್ರಿಸಲಿರುವ ಮಹಿಳಾ ರೆಫ್ರಿಗಳು; ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಫಿಫಾ ವಿಶ್ವಕಪ್‌ 

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಗುರುವಾರ ಮಧ್ಯರಾತ್ರಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. 92 ವರ್ಷಗಳ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ಮಹಿಳಾ ರೆಫ್ರಿಗಳು ಪುರುಷರ ಪಂದ್ಯವನ್ನು ನಿರ್ವಹಿಸಲಿದ್ದಾರೆ.

ಗ್ರೂಪ್‌ ಇ ಯ ಕೋಸ್ಟರಿಕಾ ಮತ್ತು ಜರ್ಮನಿ ನಡುವಿನ ಪಂದ್ಯದಲ್ಲಿ ಫ್ರೆಂಚ್ ರೆಫರಿ ಸ್ಟೆಫನಿ ಫ್ರಾಪಾರ್ಟ್ ಮುಖ್ಯ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.‌ ಇವರಿಗೆ ಲೈನ್ಸ್‌ವುಮನ್‌ ರೆಫರಿಗಳಾಗಿ  ಬ್ರೆಜಿಲ್‌ನ ನ್ಯೂಝಾ ಬ್ಯಾಕ್ ಮತ್ತು ಮೆಕ್ಸಿಕೊದ ಕರೆನ್ ಡಯಾಝ್ ಮಡೀನಾ ಸಹಕರಿಸಲಿದ್ದು, ಇತಿಹಾಸದ ಭಾಗವಾಗಲಿದ್ದಾರೆ.

ಗ್ರೂಪ್‌ ಸಿಯಲ್ಲಿ ಮಂಗಳವಾರ ನಡೆದ ಮೆಕ್ಸಿಕೊ ಮತ್ತು ಪೋಲೆಂಡ್ ನಡುವಿನ ಪಂದ್ಯದಲ್ಲಿ ನಾಲ್ಕನೇ ರೆಫರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಫ್ರಾಪಾರ್ಟ್, ಪುರುಷರ ಫಿಫಾ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿದ್ದರು. ಇದಕ್ಕೂ ಮೊದಲು ಕಳೆದ ವರ್ಷ ಮಾರ್ಚ್‌ನಲ್ಲಿ ಆಮ್‌ಸ್ಟರ್‌ಡಮ್‌ನಲ್ಲಿ ನಡೆದ ನೆದರ್‌ಲ್ಯಾಂಡ್ಸ್‌ ಮತ್ತು ಲಾಟ್ವಿಯಾ ತಂಡಗಳ ನಡುವಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಟೆಫನಿ ಫ್ರಾಪಾರ್ಟ್ ಮುಖ್ಯ ರೆಫ್ರಿಯಾಗಿ ಕಾರ್ಯನಿರ್ವಹಿದ್ದರು. ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಮತ್ತು ಯುಇಎಫ್‌ಎ ಸೂಪರ್‌ ಕಪ್‌ನಲ್ಲೂ ರೆಫರಿಯಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ರೆಫ್ರಿ ಎಂಬ ಖ್ಯಾತಿಯೂ ಫ್ರಾಪಾರ್ಟ್ ಅವರದ್ದಾಗಿದೆ.

ಗ್ರೂಪ್ ಇ ಮತ್ತು ಎಫ್

ಫಿಫಾ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲಿ ಗುರುವಾರ, ಗ್ರೂಪ್ ಇ ಮತ್ತು ಎಫ್ ನಲ್ಲಿರುವ ತಂಡಗಳು ಅಂತಿಮ ಪಂದ್ಯವನ್ನಾಡಲಿವೆ. ನಾಕೌಟ್‌ ಹಂತ ಪ್ರವೇಶಿಸಲು 8 ತಂಡಗಳ ಪೈಕಿ 7 ತಂಡಗಳಿಗೆ ಗುರುವಾರದ ಪಂದ್ಯ ನಿರ್ಣಾಯಕವಾಗಿದೆ.

ಗ್ರೂಪ್‌ F | ಕ್ರೊವೇಷಿಯಾ vs ಬೆಲ್ಜಿಯಂ | ಸಮಯ; ರಾತ್ರಿ 8.30 | ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂ

ಗ್ರೂಪ್‌ F | ಕೆನಡಾ vs ಮೊರಕ್ಕೊ | ಸಮಯ; ರಾತ್ರಿ 8.30 | ಅಲ್‌ ತುಮಾಮ ಸ್ಟೇಡಿಯಂ

ಗ್ರೂಪ್‌ E | ಜಪಾನ್ vs ಸ್ಪೇನ್ | ಸಮಯ; ರಾತ್ರಿ 12.30 | ಖಲೀಫಾ ಸ್ಟೇಡಿಯಂ

ಗ್ರೂಪ್‌ E | ಕೋಸ್ಟರಿಕಾ vs ಜರ್ಮನಿ | ಸಮಯ; ರಾತ್ರಿ 12.30 | ಅಲ್‌ಬೈತ್‌ ಸ್ಟೇಡಿಯಂ

Join Whatsapp
Exit mobile version