ಅಂತಿಮ ಪಂದ್ಯದಲ್ಲಿ ಸೋತ ಫೆಡರರ್: 24 ವರ್ಷಗಳ ಟೆನಿಸ್ ಪ್ರಯಾಣಕ್ಕೆ ‌ಕಣ್ಣೀರ ವಿದಾಯ

ಲಂಡನ್‌: ಬದ್ದ ಎದುರಾಳಿ ಜತೆಗಾರನಾಗಿ ವೃತ್ತಿ ಜೀವನದ ಕೊನೆಯ ಪಂದ್ಯವನ್ನಾಡಿದ ಟೆನಿಸ್‌ ಲೋಕದ ದಿಗ್ಗಜ ರೋಜರ್‌ ಫೆಡರರ್‌, ತಮ್ಮ 24 ವರ್ಷಗಳ ಅಮೋಘ ಪ್ರಯಾಣಕ್ಕೆ ಸೋಲಿನ ವಿದಾಯ ಹೇಳಿದ್ದಾರೆ.

ಲಂಡನ್‌ನಲ್ಲಿ ನಡೆದ ಲೆವರ್‌ ಕಪ್‌ ಟೂರ್ನಿಯ ಡಬಲ್ಸ್‌ನಲ್ಲಿ ಟೀಮ್‌ ಯುರೋಪ್‌ನ ಫೆಡರರ್ ಮತ್ತು ನಡಾಲ್ ಜೋಡಿ, ಟೀಮ್ ವರ್ಲ್ಡ್‌ನ ಫ್ರಾನ್ಸಿಸ್ ಟಿಯಾಫೋ ಮತ್ತು ಜಾಕ್ ಸಾಕ್ ವಿರುದ್ಧ 4-6, 7-6 (7/2),11-9 ಅಂತರದಲ್ಲಿ ಸೋಲನುಭವಿಸಿದರು. ಆ ಮೂಲಕ 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಫೆಡರರ್‌, ಟೆನಿಸ್‌ ಜಗತ್ತಿಗೆ ನೋವಿನ ವಿದಾಯ ಹೇಳಿದ್ದಾರೆ.

- Advertisement -

ಸೆಪ್ಟಂಬರ್‌ 15ರಂದು ನಿವೃತ್ತಿ ಘೋಷಿಸಿದ್ದ ಶ್ರೇಷ್ಠ ಆಟಗಾರ ಫೆಡರರ್‌, ಲೇವರ್ ಕಪ್‌, ತನ್ನ ವೃತ್ತಿ ಜೀವನದ ಅಂತಿಮ ಟೂರ್ನಿ ಆಗಿರಲಿದೆ ಎಂದು ಹೇಳಿದ್ದರು. ಹೀಗಾಗಿ ಶ್ರೇಷ್ಠ ಆಟಗಾರ ಕೊನೆಯದಾಗಿ ಟೆನಿಸ್‌ ಅಂಗಳಕ್ಕೆ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಅರೆನಾದಲ್ಲಿ ಪ್ರೇಕ್ಷಕಕರು ಕಿಕ್ಕಿರಿದು ಸೇರಿದ್ದರು. ಸ್ವಿಸ್‌-ಸ್ಪೇನ್‌ ಜೋಡಿ ಮೊದಲ ಸೆಟ್‌ ಗೆದ್ದು ಮುನ್ನಡೆ ಸಾಧಿಸಿದ್ದರು. ಆದರೆ ಟ್ರೈಬ್ರೇಕರ್‌ಗೆ ಸಾಗಿದ  ನಂತರದ ಎರಡು ಸೆಟ್‌ಗಳನ್ನು ರೋಚಕ ಹೋರಾಟದಲ್ಲಿ ಟಿಯಾಫೋ ಮತ್ತು ಜಾಕ್ ಸಾಕ್ ತಮ್ಮದಾಗಿಸಿಕೊಂಳ್ಳುವ ಮೂಲಕ ಪಂದ್ಯ ಗೆದ್ದರು.

ಪಂದ್ಯದ ಬಳಿಕ ಫೆಡರರ್‌ ತುಂಬಾ ಭಾವುಕರಾದರು. ಬದ್ಧವೈರಿಯ ವಿದಾಯವನ್ನು ನೆನೆದು ಸ್ಪೇನ್‌ನ ರಫೆಲ್‌ ನಡಾಲ್‌ ಕಣ್ಣೀರಾದರು. ಈ ವೇಳೆ ಬೆಂಚ್‌ನಲ್ಲಿ ಪಕ್ಕದಲ್ಲೇ ಕುಳಿತಿದ್ದ ಫೆಡರರ್‌ಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾಗಲಿಲ್ಲ. ಅವರು ಕೂಡ ಅತ್ತು ಬಿಟ್ಟರು. ಈ ವೇಳೆ ಹಾಜರಿದ್ದ ಸಹ ಆಟಗಾರರು, ಮಾಜಿ ಆಟಗಾರರು ಹಾಗೂ ಕುಂಟುಂಬಸ್ಥರೊಂದಿಗೂ ಮಾತನಾಡುವ ವೇಳೆ ಫೆಡರರ್‌ ಅಳುತ್ತಲೇ ಇದ್ದರು.

ಟೆನಿಸ್‌ನ ಸೌಂದರ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ಫೆಡರರ್‌ ಇನ್ನು ಮುಂದೆ ವೃತ್ತಿಪರ ಟೆನಿಸ್‌ ಆಡುವುದಿಲ್ಲ ಎಂಬುದನ್ನು ಅರಿತ  ಅಭಿಮಾನಿಗಳು ಭಾರದ ಹೃದಯದಿಂದ ಚಪ್ಪಾಲೆಯ ವಿದಾಯ ನೀಡಿದರು.

‘ನಾನು ಈ ಸೋಲಿನ ಕಹಿ ನೆನಪನ್ನು ಹೇಗೊ ನಿಭಾಯಿಸುತ್ತೇನೆ’ ಎಂದು ಫೆಡರರ್ ಕಣ್ಣೀರು ಹಾಕಿದರು. ‘ಇದೊಂದು ಅದ್ಭುತ ದಿನವಾಗಿದೆ. ನಾನು ಸಂತೋಷವಾಗಿದ್ದೇನೆ, ದುಃಖವಿಲ್ಲ’ ಎಂದು ಅಭಿಮಾನಿಗಳಿಗೆ ತಿಳಿಸುತ್ತೇನೆ, ಇಲ್ಲಿ ಆಡಿದ್ದು ತುಂಬಾ ಸಂತೋಷವಾಯಿತು. ಬಹಳ ದಿನಗಳ ಬಳಿಕ ಮೈದಾನಕ್ಕೆ ಇಳಿದಿದ್ದೆ’ ಎಂದು ಫೆಡರರ್‌ ಪಂದ್ಯದ ಬಳಿಕ ಹೇಳಿದರು. ‘ಈ ಸೋಲಿನಿಂದ ನನಗೆ ಯಾವುದೇ ಒತ್ತಡ ಇಲ್ಲ, ಆದರೆ, ಪಂದ್ಯವು ಅದ್ಭುತವಾಗಿತ್ತು.ರಾಫಾ ಅವರೊಂದಿಗೆ ಆಡಿದ್ದು ಖುಷಿ ತಂದಿದೆ. ಇಲ್ಲಿರುವ ಎಲ್ಲ ಟೆನಿಸ್ ದಂತಕಥೆಗಳಿಗೆ ಧನ್ಯವಾದಗಳು’ ಎಂದು ಹೇಳಿದರು.

2021ರ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದ ಸೋಲಿನ ಬಳಿಕ ಫೆಡರರ್, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಟೆನಿಸ್ ಅಂಗಳದಿಂದ ದೂರ ಉಳಿದಿದ್ದರು. 41 ವರ್ಷದ ಫೆಡರರ್, 2013ರಲ್ಲಿ ವಿಂಬಲ್ಡನ್‌ ಅಂಗಳದಲ್ಲಿ ಚಾಂಪಿಯನ್ ಆಗುವ ಮೂಲಕ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ 6 ಆಸ್ಟ್ರೇಲಿಯನ್ ಓಪನ್, 5 ಯುಎಸ್ ಓಪನ್, 8 ವಿಂಬಲ್ಡನ್ ಹಾಗೂ 1 ಫ್ರೆಂಚ್ ಓಪನ್ ಸೇರಿದಂತೆ ಒಟ್ಟು 20 ಗ್ರ್ಯಾನ್‌ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

- Advertisement -