Home ಟಾಪ್ ಸುದ್ದಿಗಳು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಬಿಇ ಪದವೀಧರೆ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಬಿಇ ಪದವೀಧರೆ ಆತ್ಮಹತ್ಯೆ

►ಕಿರುಕುಳದ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖ

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ನಡೆದಿದೆ.

ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಕಬ್ಬನ್ ಪೇಟೆಯ 2ನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿವಾಹಿತೆ ಬಿಇ ಪದವೀಧರೆಯಾಗಿದ್ದು, 2020ರಲ್ಲಿ ಆಕೆಯ ಪೋಷಕರು ಮಂಜುನಾಥ್ ಎಂಬಾತನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು.

ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಐಶ್ವರ್ಯ ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 240 ಗ್ರಾಂ ಚಿನ್ನಾಭರಣ ಹಾಗೂ ಮೊದಲಿಗೆ 2 ಲಕ್ಷ ರೂ. ಹಣ ನೀಡಿದ್ದರು. ನಂತರ ವರದಕ್ಷಿಣೆಗಾಗಿ ಪೀಡಿಸಿದ ಕಾರಣ ಐಶ್ವರ್ಯ ಕುಟುಂಬಸ್ಥರು ಮತ್ತೆ 5 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಮೃತ ಐಶ್ವರ್ಯ ದಂಪತಿಗೆ ಒಂದೂವರೆ ವರ್ಷದ ಮುದ್ದಾದ ಮಗು ಇದೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಐಶ್ವರ್ಯ ಇಂದು ಕುಟುಂಬಸ್ಥರಿಗೆ ಡೆತ್ ನೋಟ್ ಬರೆದು ವಾಟ್ಸಾಪ್ ಮೂಲಕ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಹಲಸೂರುಗೇಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಐಶ್ವರ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಡೆತ್ ನೋಟ್‌ನಲ್ಲಿ ಪತಿ ಮತ್ತು ಕುಟುಂಬಸ್ಥರು ನೀಡುತ್ತಿದ್ದ ಕಿರುಕುಳದ ಕುರಿತು ಉಲ್ಲೇಖವಿದ್ದು, ಪತಿ ಮಂಜುನಾಥ್, ಮಾವ ರಾಜೇಂದ್ರನ್, ಅತ್ತೆ ರತ್ನ ಹಾಗೂ ನಾದಿನಿ ಸುಧಾ ವಿರುದ್ದ ದೂರು ದಾಖಲಿಸಲಾಗಿದೆ.

Join Whatsapp
Exit mobile version