Home ಕರಾವಳಿ ಫಾಝಿಲ್, ಮಸೂದ್, ಜಲೀಲ್ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಶೀಘ್ರ ತೀರ್ಮಾನ: ಗೃಹ ಸಚಿವ

ಫಾಝಿಲ್, ಮಸೂದ್, ಜಲೀಲ್ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಶೀಘ್ರ ತೀರ್ಮಾನ: ಗೃಹ ಸಚಿವ

‘ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ’

ಮಂಗಳೂರು: ಹತ್ಯೆಗೀಡಾದ ಫಾಝಿಲ್, ಮಸೂದ್ ಮತ್ತು ಜಲೀಲ್ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಮತೀಯ ಕೊಲೆಗಳು ನಡೆದಾಗ ಪರಿಹಾರ ನೀಡುವಲ್ಲಿ ತಾರತಮ್ಯವಾಗಿದೆ. ಈ ತಾರತಮ್ಯವನ್ನು ಸರಿಪಡಿಸಲು ನಿರ್ಧರಿಸಲಾಗಿದೆ ಎಂದರು.

ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ.  ಕೋಮು ಸಾಮರಸ್ಯ ತರಲು ಸೂಚನೆ ನೀಡಿದ್ದೇನೆ. ನೈತಿಕ ಪೊಲೀಸ್ ಗಿರಿ ನಡೆದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತೆ. ಇದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದರು.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ನೈತಿಕ ಪೊಲೀಸ್ ಗಿರಿ ನಡೆಯಲು ಅವಕಾಶವೇ ಕೊಡಬಾರದು. ಯುವ ಸಮೂಹದಲ್ಲಿ ಡ್ರಗ್ಸ್ ಗೆ ಬಲಿಯಾಗಿದೆ. ಡ್ರಗ್ಸ್ ದಂಧೆ ತಡೆಯೋಕೆ ಆಗದ ರೀತಿಯಲ್ಲಿ ಬೆಳೆಯುತ್ತಿದೆ. ಆಗಸ್ಟ್ 15ರೊಳಗೆ ಕರಾವಳಿಯಲ್ಲಿ ಯಾವುದೇ ಡ್ರಗ್ಸ್ ಸಿಗಬಾರದಂತೆ ಕ್ರಮ ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಕರಾವಳಿ ಮಾತ್ರವಲ್ಲ ಕೋಮು ವೈಷಮ್ಯ ಇರುವ ಕಡೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಅದರ ರೂಪುರೇಷೆ ಬಗ್ಗೆ ಕಮಿಷನರ್ ತಯಾರಿಸುತ್ತಾರೆ. ಇದರ ಮುಖ್ಯ ಉದ್ದೇಶ ನೈತಿಕ ಪೊಲೀಸ್‌ಗಿರಿ ಹತ್ತಿಕ್ಕುವುದು. ಮೊದಲಿಗೆ ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ  ಮಾಡುತ್ತೇವೆ. ಇಲ್ಲಿ ಯಶಸ್ವಿಯಾದರೆ ಇಡೀ ರಾಜ್ಯದಲ್ಲಿ ವಿಸ್ತರಣೆ ಮಾಡುತ್ತೇವೆ ಎಂದರು.

ಸರ್ವಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆ ಭರವಸೆ ಕೊಟ್ಟಿದ್ದೇವೆ. ಶಾಂತಿಯ ತೋಟಕ್ಕೆ ತೊಂದರೆ ಮಾಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಡೀತಿದೆ. ನಮಗೆ ಕೋಮು ಸಾಮರಸ್ಯ ಇರಬೇಕು. ಯಾರು ಪ್ರಚೋದನೆ ಮಾಡುತ್ತಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮ್ಮ ಬಳಿ ಕಾನೂನುಗಳಿವೆ ಎಂದರು.

Join Whatsapp
Exit mobile version