ನವದೆಹಲಿ: ಕೆಲಸಕ್ಕೆ ಸೇರಲು ಬಯಸಿದ ಸೊಸೆಯ ಮೇಲೆ ಆಕೆಯ ಮಾವ ಇಟ್ಟಿಗೆಯಿಂದ ಮನಸೋಇಚ್ಛೆ ಹಲ್ಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಸೊಸೆ ಕಾಜಲ್ ಕೆಲಸಕ್ಕೆ ಸೇರಲು ಬಯಸಿದ್ದರು. ಆಕೆಯ ನಿರ್ಧಾರವನ್ನು ಗಂಡನ ಮನೆಯವರು ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಜಲ್ ಕೆಲಸಕ್ಕೆ ಸೇರಿ ಗಂಡ ಪ್ರವೀಣ್ ಕುಮಾರ್’ಗೆ ಸಹಾಯ ಮಾಡಲು ಬಯಸಿದ್ದರು. ಆ ನಿಟ್ಟಿನಲ್ಲಿ ಆಕೆ ಮಂಗಳವಾರ ಕೆಲಸಕ್ಕಾಗಿ ಸಂದರ್ಶನಕ್ಕೆ ತೆರಳುತ್ತಿದ್ದರು. ಈ ವಿಷಯ ತಿಳಿದ ಆಕೆಯ ಮಾವ ನಡು ರಸ್ತೆಯಲ್ಲೇ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.
ಮಾವ ಸೊಸೆ ಮೇಲೆ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.