►ಸಂತ್ರಸ್ತನ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲು
ಮಂಗಳೂರು: ಸುಬ್ರಹ್ಮಣ್ಯದಲ್ಲಿ ನಿನ್ನೆ ಸಂಜೆ ಮುಸ್ಲಿಮ್ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡದ ಮೇಲೂ ಸುಬ್ರಹ್ಮಣ್ಯ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ.
ಥಳಿತಕ್ಕೊಳಗಾದ ಕಲ್ಲುಗುಂಡಿ ಹನೀಫ್ ಎಂಬವರ ಪುತ್ರ ಹಫೀದ್ ನೀಡಿದ ದೂರಿನಂತೆ 12 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ರೀತಿ ಯುವತಿಯ ತಂದೆ ನೀಡಿದ ದೂರಿನಂತೆ ಹಫೀದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಂದು ವರ್ಷದ ಹಿಂದೆ ಇನ್’ಸ್ಟಾಗ್ರಾಂನಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ಪರಿಚಿತಳಾಗಿದ್ದು, ಈ ಹಿಂದೆ ಎರಡು ಮೂರು ಬಾರಿ ಸುಬ್ರಹ್ಮಣ್ಯ ಕೆಎಸ್’ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಿ ಅವಳನ್ನು ಮಾತನಾಡಿಸಿಕೊಂಡು ಬರುತ್ತಿದ್ದೆ. ಜ.5ರಂದು ಸಂಜೆ ಆಕೆಯೊಂದಿಗೆ ಮಾತನಾಡುತ್ತಿದ್ದಾಗ ಅಪರಿಚಿತ ಎರಡು ಮೂರು ಮಂದಿ ಬಂದು ನನ್ನನ್ನು ಎಳೆದುಕೊಂದು ಅಲ್ಲಿಯೇ ರಸ್ತೆ ಬದಿ ನಿಂತಿದ್ದ ಜೀಪೊಂದರಲ್ಲಿ ಹಾಕಿದರು. ಇತರ ಐದಾರು ಮಂದಿ ಜೀಪಿನಲ್ಲಿ ಕುಳಿತುಕೊಂಡು ಕುಮಾರದಾರ ಜಂಕ್ಷನ್ ಬಳಿ ಇರುವ ಹಳೆಯ ಕಟ್ಟಡದ ಕೋಣೆಯೊಳಗೆ ನನ್ನನ್ನು ಕೂಡಿ ಹಾಕಿ ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ನೀಡಿದ್ದಾನೆ.
ಹುಡುಗಿಯ ತಂದೆ ಕೂಡಾ ಪೊಲೀಸ್ ದೂರು ನೀಡಿದ್ದು, ಜ. 5ರಂದು ಸಂಜೆ ನನ್ನ ಮಗಳು ಬಸ್’ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಹಫೀದ್ ಎಂಬಾತ ತನ್ನನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಗಳ ದೂರವಾಣಿ ಸಂಖ್ಯೆ ಕೇಳಿದಾಗ ಕೊಡಲು ನಿರಾಕರಿಸಿದ್ದು, ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ಪೊಲೀಸರು ಎರಡೂ ಕಡೆಯ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದ್ದು, ಹಫೀದ್ ವಿರುದ್ಧ ಪೋಕ್ಟೋ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.