Home ಟಾಪ್ ಸುದ್ದಿಗಳು ರಾಜಕೀಯ ದ್ವೇಷಕ್ಕೆ ಫ್ಯಾಶಿಸ್ಟ್ ಸರ್ಕಾರದಿಂದ ಅಮಾಯಕರನ್ನು ಬಂಧಿಸಿ ತುರ್ತುಪರಿಸ್ಥಿತಿ ರೀತಿಯ ವಾತಾವರಣ ಸೃಷ್ಟಿ: ಅಬ್ದುಲ್ ಮಜೀದ್...

ರಾಜಕೀಯ ದ್ವೇಷಕ್ಕೆ ಫ್ಯಾಶಿಸ್ಟ್ ಸರ್ಕಾರದಿಂದ ಅಮಾಯಕರನ್ನು ಬಂಧಿಸಿ ತುರ್ತುಪರಿಸ್ಥಿತಿ ರೀತಿಯ ವಾತಾವರಣ ಸೃಷ್ಟಿ: ಅಬ್ದುಲ್ ಮಜೀದ್ ಮೈಸೂರು

ಬೆಂಗಳೂರು: ಕೋಮುವಾದಿ ಫಾಶಿಸ್ಟ್ ಬಿಜೆಪಿ ಸರ್ಕಾರ ತನ್ನ ರಾಜಕೀಯ ಶತ್ರುಗಳನ್ನು ಗುರಿಯಾಗಿಸಿಕೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ವಿರುದ್ಧ ಆರಂಭಿಸಿದ ಅಸಾಂವಿಧಾನಿಕ ದಾಳಿ ಮತ್ತು ಕಾನೂನುಬಾಹಿರ ಬಂಧನಗಳ ಮುಂದುವರಿದ ಭಾಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಪಕ್ಷ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ) ಕಾರ್ಯಕರ್ತರನ್ನು ಕೂಡ ಕಾನೂನುಬಾಹಿರವಾಗಿ ಬಂಧಿಸುತ್ತಿದೆ. ಯಾವುದೇ ಆಧಾರವಿಲ್ಲದೆ ಅಮಾಯಕರನ್ನು ಕೇವಲ ರಾಜಕೀಯ ದ್ವೇಷಕ್ಕೆ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯಂತಹ ವಾತಾವರಣವನ್ನು ಸೃಷ್ಟಿ ಮಾಡಿ ನಮ್ಮ ಪಕ್ಷವನ್ನು ಮತ್ತು ಪಿ.ಎಫ್.ಐ ಹಾಗೂ ಸಿ.ಎಫ್.ಐ ಸಂಘಟನೆಗಳನ್ನು ಭಯಪಡಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಎಸ್ ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದರು.

ಪಿ.ಫ್.ಐ ವಿರುದ್ಧ ವಾರೆಂಟ್ ಹೊಂದಿರುವಂತಹ ರಾಷ್ಟ್ರೀಯ ತನಿಕಾ ಸಂಸ್ಥೆ ಎನ್.ಐ.ಎ ಅದನ್ನೇ ನೆಪವಾಗಿಟ್ಟುಕೊಂಡು ಎಸ್ಡಿಪಿಐ ಪಕ್ಷ ಮತ್ತು ಸಿ.ಎಫ್.ಐ ಸಂಘಟನೆಯ ವಿರುದ್ಧ ಕಾನೂನುಬಾಹಿರ ದಾಳಿಗಳು ಮತ್ತು ಬಂಧನಗಳನ್ನು ಮಾಡುತ್ತಿರುವ ಈ ಪ್ರಜಾಪ್ರಭುತ್ವವಿರೋಧಿ ಸರ್ಕಾರದ ನಡೆ ದೇಶದಲ್ಲಿ ಕಾನೂನು, ಸಂವಿಧಾನ ಇದೆಯೋ? ಇಲ್ಲವೋ? ಅನ್ನುವ ಅನುಮಾನ ಮೂಡುವಷ್ಟರ ಮಟ್ಟಿಗೆ ಅಸಹ್ಯಕರ ರೀತಿಯ ದ್ವೇಷ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಇದು ಫಾಶಿಸ್ಟ್ ಬಿಜೆಪಿಯ ರಾಷ್ಟ್ರಮಟ್ಟದ ಷಡ್ಯಂತ್ರವಾಗಿದ್ದು ಈ ರೀತಿ ಯಾವುದೇ ಷಡ್ಯಂತ್ರಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ಕಾನೂನಿನ ಮೂಲಕ ಉತ್ತರವನ್ನು ಕೊಡುವಂತಹ ಎಲ್ಲ ಶಕ್ತಿಯು ಎಸ್ ಡಿಪಿಐ ಪಕ್ಷ ಹೊಂದಿರುತ್ತದೆ. ನಮ್ಮನ್ನು ಭಯಪಡಿಸುವ ಮೂಲಕ ಫಾಶಿಸ್ಟ್ ಸರ್ಕಾರದ ವಿರುದ್ಧ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ಇಂದು ನಿರುದ್ಯೋಗ, ಭ್ರಷ್ಟಾಚಾರ, ಕೋಮು ವೈಷಮ್ಯದಂತಹ ವಿಷಕಾರಿ ವಾತಾವರಣಕ್ಕೆ ಕಾರಣವಾಗಿರುವ ಫಾಶಿಸ್ಟ್ ಬಿಜೆಪಿಯ ಯಾವ ಕುತಂತ್ರಗಳಿಗೂ ಕೂಡ ನಾವು ಬಲಿಯಾಗುವುದಿಲ್ಲ ಎಂದು ಅವರು ಹೇಳಿದರು.
ಈ ಎಲ್ಲವನ್ನು ಕೂಡ ನಾವು ಜನರ ಮುಂದೆ ಇಡುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಚುನಾವಣೆಗಳ ಮೂಲಕ ಮತ್ತು ಕಾನೂನು ಹೋರಾಟಗಳ ಮೂಲಕ ಎದುರಿಸುತ್ತೇವೆ. ಕೋಮುವಾದಿ ಫಾಶಿಸ್ಟ್ ಬಿಜೆಪಿಯ ಮೋದಿ ನೇತೃತ್ವದ ಈ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ದೇಶದ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಅಬ್ದುಲ್ ಮಜೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version