ಕಾಶ್ಮೀರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್- ಎನ್.ಸಿ. ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಜಾರಿ ನಿರ್ದೇಶನಾಲಯ- ಇಡಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ಅಸೋಸಿಯೇಶನ್ ಲೆಕ್ಕಾಚಾರದಲ್ಲಿ ಅಕ್ರಮ ನಡೆದಿದ್ದು ಆ ಬಗ್ಗೆ ಫಾರೂಕ್ ರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತು.
ಶ್ರೀನಗರದ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾ ಅವರು ನಗರದ ರಾಜ್ ಬಾಗ್ ನಲ್ಲಿರುವ ಇಡಿ ಕಚೇರಿಗೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದರು. ಬಾಗಿಲಲ್ಲಿ ಕಾದಿದ್ದ ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯಲಿರುವುದರಿಂದ ಇವೆಲ್ಲ ತಂತ್ರಗಳು ಕೇಂದ್ರ ಸರಕಾರದ ಪರವಾಗಿ ನಡೆದಿವೆ ಎಂದು ಆಪಾದಿಸಿದರು.
“ನಾನು ಹೆಚ್ಚೇನೂ ಹೇಳುವುದಿಲ್ಲ. ಚುನಾವಣೆ ನಡೆದು ಮುಗಿಯುವವರೆಗೆ ಅವರು ನಮಗೆ ತೊಂದರೆ ಕೊಡುತ್ತಲೇ ಇರುತ್ತಾರೆ.” ಎಂದರು. ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮೇ 27ರಂದು ಶ್ರೀನಗರದ ಇಡಿ ಕಚೇರಿಗೆ ಹಾಜರಾಗಿ ತನಿಖೆಗೆ ಒಳಪಡುವಂತೆ ಜಾರಿ ನಿರ್ದೇಶನಾಲಯ ನೋಟೀಸು ನೀಡಿತ್ತು.
ಮೂರು ಬಾರಿಯ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ 84ರ ಪ್ರಾಯದ ಫಾರೂಕ್ ಅಬ್ದುಲ್ಲಾ ಅವರು 2019ರಲ್ಲೂ ಇದೇ ಮೊಕದ್ದಮೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ದೇಶದಲ್ಲಿ ಪ್ರತಿಪಕ್ಷಗಳನ್ನು ಹುಡುಕಿ ಹುಡುಕಿ ಸಮನ್ಸ್ ನೀಡಲಾಗುತ್ತಿರುವುದು ಮಾಮೂಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಲ್ಪ ಹೆಚ್ಚೇ ಇದೆ ಎಂದು ಬಿಜೆಪಿಯೇತರ ಪಕ್ಷದವರೊಬ್ಬರು ಆರೋಪಿಸಿದರು.
ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದವರ ಜೊತೆಗೆ ಹಿಂದೆ ಸಹಕಾರದಿಂದ ನಡೆದುಕೊಂಡಂತೆಯೇ ಮುಂದೆಯೂ ತನಿಖೆಗೆ ಸಹಕಾರ ನೀಡುವುದಾಗಿಯೂ ಫಾರೂಕ್ ಅಬ್ದುಲ್ಲಾ ಹೇಳಿದರು.