ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಕೃಷಿ ಸಚಿವರ ಸವಾಲನ್ನು ಸ್ವೀಕರಿಸಲು ರೈತರು ಸಿದ್ಧ: ಎಐಕೆಎಸ್

Prasthutha|

ನವದೆಹಲಿ: ರದ್ದುಪಡಿಸಿರುವ 3 ಕೃಷಿ ಕಾಯ್ದೆಗಳನ್ನು ಮರಳಿ ತರುವ ಆಶಯವನ್ನು ಮೋದಿ ಸರ್ಕಾರ ಹೊಂದಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ 24ರಂದು ನಾಗ್ಪುರದಲ್ಲಿ ಹೇಳಿದ್ದಾರೆ. ಇದು ರೈತರು ಮತ್ತು ಕಾರ್ಮಿಕರು ಸೇರಿದಂತೆ ಭಾರತದ ಜನರಿಗೆ ಸವಾಲಾಗಿದೆ. ಇದು ಭಾರತೀಯ ಮತ್ತು ವಿದೇಶಿ ಎರಡೂ ಕಾರ್ಪೊರೇಟ್ ಶಕ್ತಿಗಳ ಪರವಾಗಿ ಮತ್ತು WB-IMF-WTO ನ ಜಾಗತಿಕ ಸಾಮ್ರಾಜ್ಯಶಾಹಿ ತ್ರಿಮೂರ್ತಿಗಳ ಪರವಾಗಿ ಒಡ್ಡಿರುವ ಸವಾಲು. ಈ ಸವಾಲನ್ನು ಸ್ವೀಕರಿಸಲು ಭಾರತದ ರೈತಾಪಿ ಜನಗಳು ಮತ್ತು ಕಾರ್ಮಿಕ ವರ್ಗ ಸಿದ್ಧವಾಗಿದ್ದಾರೆ ಎಂದು ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್) ಹೇಳಿದೆ.

- Advertisement -

ಪ್ರಧಾನಿ ಮೋದಿ ಒಂದು “ಕಾರ್ಪೊರೇಟ್ ಗಳಿಂದ, ಕಾರ್ಪೊರೇಟ್ ಗಳಿಗಾಗಿ ಕಾರ್ಪೊರೇಟ್ ಗಳ ಸರ್ಕಾರ” ವನ್ನು ಪ್ರತಿನಿಧಿಸುತ್ತಾರೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಇನ್ನೂ ಪ್ರಬಲವಾದ ಹೋರಾಟಗಳು ನಡೆಯಲಿವೆ, ಅವು ಅಂತಿಮವಾಗಿ ಪ್ರಸ್ತುತ ಮೋದಿ ಸರ್ಕಾರದ ಅಡಿಯಲ್ಲಿನ ಕಾರ್ಪೊರೇಟ್ ಆಡಳಿತವನ್ನು ನಿರ್ಮೂಲನೆ ಮಾಡುತ್ತವೆ ಎಂದು ಎಐಕೆಎಸ್ ನ ಅಧ್ಯಕ್ಷ ಅಶೋಕ ಧವಳೆ ಮತ್ತು ಪ್ರಧಾನ ಕಾರ್ತದರ್ಶಿ ಹನ್ನನ್ ಮೊಲ್ಲ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್‍ ಮೋರ್ಚಾ(ಎಸ್ ಕೆಎಂ) ಹೋರಾಟವನ್ನು ಹಿಂಪಡೆದಿಲ್ಲ, ಅಮಾನತ್ತಿನಲ್ಲಿ ಇಟ್ಟಿದೆಯಷ್ಟೇ. ಮುಂದಿನ ಜನವರಿ 15 ರಂದು ನಡೆಯಲಿರುವ ಎಸ್ ಕೆಎಂ ಸಭೆಯಲ್ಲಿ ಕಾನೂನುಬದ್ಧವಾಗಿ ಸಿ2 +50% ಸೂತ್ರದಂತೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾಯ್ದೆ ತರುವುದು, ವಿದ್ಯುತ್ (ಖಾಸಗೀಕರಣ) ಮಸೂದೆಯನ್ನು ಹಿಂಪಡೆಯುವುದು ಮತ್ತು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ತೇನಿಯನ್ನು ವಜಾಗೊಳಿಸುವುದು ಮತ್ತು ಬಂಧಿಸುವುದು ಸೇರಿದಂತೆ ಉಳಿದ ಬೇಡಿಕೆಗಳ ಹೋರಾಟದ ಮುಂದುವರಿಕೆ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

- Advertisement -

ರೈತರ ಐಕ್ಯ ಹೋರಾಟವು ಕಾರ್ಪೊರೇಟ್ ಪರವಾದ ನವ-ಉದಾರವಾದಿ ನೀತಿಗಳ ವಿರುದ್ಧ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ರೈತ ಮತ್ತು ಕಾರ್ಮಿಕ ವರ್ಗದ ಅತಿದೊಡ್ಡ ಏಕತೆಯನ್ನು ಸಾಧಿಸಿದೆ. ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು 23-24 ಫೆಬ್ರವರಿ 2021 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಘೋಷಿಸಿದೆ, ಎಲ್ಲರ ಸಾಮಾನ್ಯ ಬೇಡಿಕೆಗಳ ಮೇಲೆ ನಡೆಯಲಿರುವ ಈ ಸಾರ್ವತ್ರಿಕ ಮುಷ್ಕರಕ್ಕೆ ಎಸ್ಕೆಸಎಂ ಬೆಂಬಲ ನೀಡಿದೆ. 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಕೃಷಿ ಕಾರ್ಮಿಕರಿಗೆ ಸ್ಥಿರವಾದ ಉದ್ಯೋಗ ಮತ್ತು ಕನಿಷ್ಠ ಕೂಲಿಗಾಗಿ ಒಂದು ಸಮಗ್ರ ಕಾನೂನನ್ನು ಜಾರಿಗೊಳಿಸಬೇಕು, ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆಯನ್ನು ಸ್ಥಗಿತಗೊಳಿಸಬೇಕು, ಬೆಲೆ ಏರಿಕೆ ಮತ್ತು ನಿರುದ್ಯೋಗವನ್ನು ನಿಗ್ರಹಿಸಬೇಕು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‍)ಯ ರಕ್ಷಣೆ ಈ ಸಾರ್ವತ್ರಿಕ ಮುಷ್ಕರದ ಪ್ರಮುಖ ಆಗ್ರಹಗಳು. ಹೀಗೆ, ಜನರ ಹಿತಾಸಕ್ತಿ ಕಾಪಾಡಲು ಮತ್ತು ಮೋದಿ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ದೇಶಾದ್ಯಂತ ಹೆಚ್ಚೆಚ್ಚು ಹೋರಾಟಗಳು ನಡೆಯಲಿವೆ ಎಂದು ಹನ್ನನ್ ಮೊಲ್ಲಾ ಮತ್ತು ಅಶೋಕ್ ಧವಳೆ ಎಚ್ಚರಿಸಿದ್ದಾರೆ.



Join Whatsapp