ನವದೆಹಲಿ : ರಾಜಸ್ಥಾನದ ಶಹಜಹಾನ್ ಪುರ ಗಡಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿ ಬ್ಯಾರಿಕೇಡ್ ಗಳನ್ನು ಮುರಿದ ಪ್ರತಿಭಟನಕಾರರ ಮೇಲೆ ಹರ್ಯಾಣ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ ಘಟನೆ ನಡೆದಿದೆ. ರೈತರು ಟ್ರಾಕ್ಟರ್ ಗಳಲ್ಲಿ ದೆಹಲಿಯತ್ತ ರ್ಯಾಲಿ ಹಮ್ಮಿಕೊಂಡಿದ್ದರು.
ರೈತರ ಒಂದು ತಂಡ ಶಹಜಹಾನ್ ಪುರ – ರೆವಾರಿ ಗಡಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆ ಬಂದ್ ಮಾಡಿದೆ. ರಾಜಸ್ಥಾನದ ಮೂಲಕ ಬಂದ ಮತ್ತೊಂದು ಗುಂಪು ಹರ್ಯಾಣ ಪ್ರವೇಶಿಸಲು ಟ್ರಾಕ್ಟರ್ ಗಳ ಮೂಲಕ ಯತ್ನಿಸಿತು. ಆದರೆ, ಇವರು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಸ್ಥಳದಲ್ಲಿರುವ ರೈತರು ಸ್ಪಷ್ಟಪಡಿಸಿದ್ದಾರೆ.
ಬಹುತೇಕ ಯುವಕರೇ ಇದ್ದ ಒಂದು ಗುಂಪು ಬ್ಯಾರಿಕೇಡ್ ಗಳನ್ನು ತಳ್ಳಿ ದೆಹಲಿಯತ್ತ ತೆರಳಲು ಯತ್ನಿಸಿತು. ಅವರನ್ನು ನಿಯಂತ್ರಿಸಲು ಜಲಫಿರಂಗಿ, ಅಶ್ರುವಾಯು ಪ್ರಯೋಗ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.