ಬೆಳಗಾವಿಯಲ್ಲಿ ‘ಜನ-ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇ‌ಡ್’ ತಡೆದ ಪೊಲೀಸರು: ಟ್ರ್ಯಾಕ್ಟರ್ ಸೀಜ್ ಮಾಡುವುದಾಗಿ ಬೆದರಿಕೆ

Prasthutha|

ಬೆಳಗಾವಿ : ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವವನ್ನು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್‌ ಪರೇ‌ಡ್ ನಡೆಸುವ ಮೂಲಕ ವಿಭಿನ್ನವಾಗಿ ಹೋರಾಟ ಮುಂದುವರೆಸಲು ದೇಶಾದ್ಯಂತ ರೈತ ಸಂಘಟನೆಗಳು ತೀರ್ಮಾನಿಸಿವೆ. ಇದರ ಭಾಗವಾಗಿ ಇಂದು ಬೆಳಗಾವಿಯಲ್ಲಿ ಆರಂಭವಾಗಬೇಕಿದ್ದ ಟ್ಯ್ರಾಕ್ಟರ್ ರ್ಯಾಲಿಗೆ ಪೊಲೀಸ್ ಮತ್ತು ಆರ್‌ ಟಿಓ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ತಮ್ಮ ಆದೇಶ ಉಲ್ಲಂಘಿಸಿ ಪರೇಡ್ ನಡೆಸುವ ಟ್ಯ್ರಾಕ್ಟರ್‌ ಗಳನ್ನು ಸೀಜ್ ಮಾಡುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

- Advertisement -

ಜ.26 ರಂದು ಬೆಂಗಳೂರಿನಲ್ಲಿ ‘ಜನ-ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ ಪರೇ‌ಡ್’ ನಡೆಸಲು ನೂರಾರು ಸಂಘಟನೆಗಳು ತೀರ್ಮಾನಿಸಿವೆ. ಅದರ ಭಾಗವಾಗಿ ರಾಜ್ಯದ ಹಲವು ಭಾಗಗಳಿಂದ ರೈತರು ಟ್ರ್ಯಾಕ್ಟರ್‌ ಗಳ ಮೂಲಕ ಹಲವು ಜಿಲ್ಲೆಗಳಲ್ಲಿ ರ್ಯಾಲಿ ನಡೆಸಿ ಜನವರಿ 26 ರಂದು ಬೆಂಗಳೂರು ತಲುಪಲು ನಿರ್ಧರಿಸಿದ್ದರು. ಅದರಂತೆ ಇಂದು ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಟ್ಯ್ರಾಕ್ಟರ್‌ ರ್ಯಾಲಿ ಆರಂಭವಾಗಿದ್ದು, ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್ ಜಾಥಾಗೆ ಚಾಲನೆ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ತಲುಪಿ ನಂತರ ಧಾರವಾಡದ ಮೂಲಕ ಸಂಜೆಗೆ ಹುಬ್ಬಳ್ಳಿ ತಲುಪಲು ಯೋಜಿಸಲಾಗಿತ್ತು. ಆದರೆ ಇದನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಆರ್‌ ಟಿಓ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದು, ರೈತರ ವಾಹನಗಳನ್ನು ವಶಕ್ಕೆ ಪಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

“ನಿಮ್ಮ ಟ್ರ್ಯಾಕ್ಟರ್‌ ಗಳಿಗೆ ಇನ್ಶೂರೆನ್ಸ್ ಕಟ್ಟಿಲ್ಲ ಎಂಬುದನ್ನು ಮರೆಯಬೇಡಿ. ನಾವು ಹೋಗಲಿ ಎಂದು ಸುಮ್ಮನಿದ್ದೇವೆ. ಈಗ ನೀವು ರ್ಯಾಲಿ ಹೊರಟರೆ ಖಂಡಿತ ನಿಮ್ಮ ವಾಹನಗಳನ್ನು ಸೀಜ್‌ ಮಾಡುವುದಾಗಿ ಆರ್‌ ಟಿಓ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆದೇಶ ನೀಡಿದ್ದಾರೆ” ಎಂದು ರೈತರು ತಿಳಿಸಿದ್ದಾರೆ.

- Advertisement -

ನಾವು ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಡನೆ ಮಾತನಾಡಲು ಕರೆ ಮಾಡುತ್ತಿದ್ದೇವೆ. ಆದರೆ ನಮ್ಮ ಯಾವುದೇ ಕರೆಗಳನ್ನು ಅವರು ಸ್ವೀಕರಿಸುತ್ತಿಲ್ಲ. ಬೇಕಂತಲೇ ಅವರು ನಮ್ಮ ಕರೆ ಸ್ವೀಕರಿಸದೇ ಈ ನ್ಯಾಯಯುತ ರೈತ ಹೋರಾಟ ಹಣಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಫಲವಾಗುವುದಿಲ್ಲ. ನಮ್ಮ ಟ್ಯ್ರಾಕ್ಟರ್ ರ್ಯಾಲಿಗೆ ಅನುಮತಿ ನೀಡದಿದ್ದರೆ ಸರ್ಕಾರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು, ಮೈಸೂರು ಕಡೆಯಿಂದ, ಹೈದರಾಬಾದ್ ಕರ್ನಾಟಕ ಕಡೆಯಿಂದ, ಕೋಲಾರ- ಚಿಕ್ಕಬಳ್ಳಾಪುರದಿಂದ, ಹಾಸನ-ಚಿಕ್ಕಮಗಳೂರು ಕಡೆಯಿಂದ ಸೇರಿದಂತೆ ರಾಜ್ಯದ ಐದು ದಿಕ್ಕುಗಳಿಂದಲೂ ಬರುವ ಟ್ರಾಕ್ಟರ್‌ಗಳು ಜನವರಿ 26 ರಂದು ಬೆಂಗಳೂರು ನಗರವನ್ನು ಪ್ರವೇಶಿಸಿ ಪರೇಡ್ ನಡೆಸಲಾಗುತ್ತದೆ ಎಂದು ಹೋರಾಟಗಾರು ತಿಳಿಸಿದ್ದಾರೆ.

Join Whatsapp