Home ಟಾಪ್ ಸುದ್ದಿಗಳು 69 ವರ್ಷಗಳ ಹಿಂದೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌ ನಡೆದಿತ್ತು!

69 ವರ್ಷಗಳ ಹಿಂದೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌ ನಡೆದಿತ್ತು!

ನವದೆಹಲಿ : ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ಗಣರಾಜ್ಯೋತ್ಸವದಂದು ನಡೆದ ಪರೇಡ್‌ ನಲ್ಲಿ ಟ್ಯಾಕ್ಟರ್‌ಗಳು ಸಂಚರಿಸಿದ್ದವು!

ಜ. 26ರಂದು ಗಣರಾಜ್ಯೋತ್ಸವಂದು ಪರೇಡ್‌ ನಡೆಸುವುದು ರೂಢಿ. ಆ ದಿನ ವಿದೇಶಿ ಗಣ್ಯರೊಬ್ಬರು ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ ಮತ್ತು ಪರೇಡ್‌ ಗೆ ಸಾಕ್ಷಿಯಾಗುತ್ತಾರೆ. ಆದರೆ ಈ ಬಾರಿ ಪರೇಡ್‌ ಸಂದರ್ಭದಲ್ಲಿ ರೈತರು ತಮ್ಮ ಹೋರಾಟದ ಭಾಗವಾಗಿ ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದನ್ನು ದೇಶಕ್ಕೆ ಮಾಡುವ ಅವಮಾನ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.

ಆದರೆ 1952ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಟ್ಯಾಕ್ಟರ್‌ ಗಳ ಸಾಲು ಸಾಲು ಮೆರವಣಿಗೆ ನಡೆದಿತ್ತು ಎಂಬುದು ಈಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಟ್ರ್ಯಾಕ್ಟರ್‌ ಪರೇಡ್‌ ಹೊಸದಲ್ಲ. ಸರ್ಕಾರ ಇದನ್ನು ಅವಮಾನದ ಸಂಗತಿಯಾಗಿ, ಮುಜುಗರದ ವಿಷಯವಾಗಿ ನೋಡುವ ಅಗತ್ಯವಿಲ್ಲ. ಗಣತಂತ್ರ ಪ್ರತಿಯೊಬ್ಬನ ಹಕ್ಕನ್ನು ಎತ್ತಿಹಿಡಿಯುವ ದಿನ. ಹಾಗಾಗಿ ಅಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದೂ ರೈತರ ಹಕ್ಕು ಎಂಬ ಪ್ರತಿಪಾದಿಸಲಾಗುತ್ತಿದೆ.

ಆಗ ಪರೇಡ್‌ ನಲ್ಲಿ ಪಾಲ್ಗೊಂಡಿದ್ದ  ಟ್ರ್ಯಾಕ್ಟರ್‌ ನ ಕಪ್ಪುಬಿಳುಪಿನ ಚಿತ್ರಗಳು ಹರಿದಾಡುತ್ತಿವೆ.

ದೆಹಲಿ ಗಡಿಗಳಲ್ಲಿ ಜ. 26ರ ಪರೇಡ್‌ ಗೆ ತಮ್ಮ ಟ್ರ್ಯಾಕ್ಟರ್‌ ಗಳಿಗೆ ಅಲಂಕಾರ ಮಾಡುವ ಮೂಲಕ ಸಿದ್ಧತೆ ನಡೆಸುತ್ತಿರುವಾಗ ಐತಿಹಾಸಿಕ ಚಿತ್ರಗಳು ಹರಿದಾಡುತ್ತಿರುವುದು ರೈತರ ಹೋರಾಟಕ್ಕೆ ಹೊಸ ಹುರುಪು ತುಂಬಿದೆ.

Join Whatsapp
Exit mobile version