January 16, 2021
ಅನ್ನದಾತರ ಪ್ರತಿಭಟನೆ | ರೈತ ಸಂಘಟನೆ ನಾಯಕ ಬಲದೇವ್ ಸಿಂಗ್ ಗೆ NIA ಸಮನ್ಸ್ ಜಾರಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸರಕಾರದ ಜೊತೆಗೆ ಮಾತುಕತೆ ನಡೆಸುತ್ತಿರುವ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಲೋಕ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಬಲದೇವ್ ಸಿಂಗ್ ಸಿರ್ಸಾ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಸಮನ್ಸ್ ಜಾರಿಗೊಳಿಸಿದೆ.
ಕಾನೂನು ಬಾಹಿರ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ನ ನಾಯಕರೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಲದೇವ್ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ.
ಜ.17ರಂದು ಎನ್ ಐಎಯ ದೆಹಲಿಯ ಕೇಂದ್ರ ಕಚೇರಿಯಲ್ಲಿ ಹಾಜರಾಗುವಂತೆ ಸಿಂಗ್ ಅವರಿಗೆ ಸೂಚಿಸಲಾಗಿದೆ. ಭಾರತ ಸರಕಾರದ ವಿರುದ್ಧ ಬಂಡಾಯ ಹೆಚ್ಚುವ ಬಗ್ಗೆ, ಕಾನೂನು ಸುವ್ಯವಸ್ಥೆ ಹದಗೆಡುವ, ಭಯದ ವಾತಾವರಣ ಸೃಷ್ಟಿಸುವುದಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಎಸ್ ಎಫ್ ಜೆಯ ನಾಯಕ ಗುರ್ಪತ್ವತ್ ಸಿಂಗ್ ಪನ್ನು ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಲದೇವ್ ಸಿಂಗ್ ಗೆ ಸಮನ್ಸ್ ಜಾರಿಯಾಗಿದೆ.