ಒಡಿಶಾ| ಪತ್ನಿಯ ಶವವನ್ನು ತೋಳಿನಲ್ಲೇ ಹೊತ್ತು ತಂದ ರೈತ !

Prasthutha|

ಒಡಿಶಾ: ಒಡಿಶಾದ ಕಂಧಮಾಲ್ ಎಂಬಲ್ಲಿನ ಬುಡಕಟ್ಟು ರೈತರೊಬ್ಬರು ತನ್ನ ಪತ್ನಿಯ ಶವವನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ಉಂಟಾಗಿದೆ.

- Advertisement -


ಮಂಗಳವಾರ ಆಸ್ಪತ್ರೆಗೆ ದಾಖಲಾದ ರೈತ ಬಾಲಕೃಷ್ಣ ಕನ್ಹಾರ್ ಎಂಬವರ ಪತ್ನಿ ರುತುಮತಿ (40) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದರು. ಬಾಲಕೃಷ್ಣ ಅವರು ತನ್ನ ಪತ್ನಿಯ ಮೃತದೇಹವನ್ನು ಸಾಗಿಸಲು ಹಲವರಿಂದ ಸಹಾಯ ಕೋರಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳು ಸಹಾಯ ಮಾಡದೆ ಅವರನ್ನು ನಿರ್ಲಕ್ಷ್ಯ ತೋರಿದ್ದಾರೆ.


“ಯಾವುದೇ ವೈದ್ಯಕೀಯ ಸಿಬ್ಬಂದಿ ಅವರ ಸಹಾಯಕ್ಕೆ ಬಾರದ ಕಾರಣ, ಬಾಲಕೃಷ್ಣ ಅವರು ಶವವನ್ನು ಆಸ್ಪತ್ರೆಯ ಎರಡನೇ ಮಹಡಿಯಿಂದ ಹೊರಗೆ ಕಾಯುತ್ತಿದ್ದ ಶವ ಸಾಗಿಸುವ ವಾಹನಕ್ಕೆ ತೋಳಿನಲ್ಲೇ ಹೊತ್ತು ಕೊಂಡು ತಂದಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಬಸಂತ್ ಕುಮಾರ್ ಪಾಧಿ ಆರೋಪಿಸಿದ್ದಾರೆ.

- Advertisement -


ವಿಡಿಯೋ ವೈರಲ್ ಆದ ನಂತರ, ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ರಾಜಶ್ರೀ ಪಟ್ನಾಯಕ್ ಅವರು ಆಸ್ಪತ್ರೆಯ ಸ್ಟಾಫ್ ನರ್ಸ್ ಮತ್ತು ಹೆಲ್ಪ್ ಡೆಸ್ಕ್ ಅಟೆಂಡೆಂಟ್ ಅವರಿಂದ ವಿವರಣೆ ಕೋರಿದ್ದಾರೆ. ನಂತರ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಮತ್ತೊಬ್ಬ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ.


“ವೈದ್ಯಕೀಯ ಸಿಬ್ಬಂದಿ ತಮ್ಮ ಮೊಬೈಲ್ ಗಳಲ್ಲಿ ಸಂಗೀತ ಕೇಳುತ್ತಿದ್ದರು, ಆದರೆ ಬಾಲಕೃಷ್ಣ ಅವರು ಸಹಾಯ ಕೋರಿದರೂ ಯಾರೊಬ್ಬರೂ ಅವರ ನೆರವಿಗೆ ಬರಲಿಲ್ಲ. ಇದರಿಂದ ಬೇಸರಗೊಂಡ ಬಾಲಕೃಷ್ಣ ಅವರು ತನ್ನ ಎರಡು ವರ್ಷದ ಮಗಳನ್ನು ನೆಲದ ಮೇಲೆ ಮಲಗಿಸಿ ಪತ್ನಿಯ ಪಾರ್ಥೀವ ಶರೀರವನ್ನು ತೋಳಿನಲ್ಲಿ ಎತ್ತಿಕೊಂಡು ಹೋಗಿ ಶವ ಸಾಗಿಸುವ ವಾಹನಕ್ಕೆ ಇಳಿಸಿದ್ದಾರೆ. ಕರುಣೆ ಮರೆಯಾಗಿರುವುದು ಕಂಡು ನಾನು ದಿಗಿಲುಗೊಂಡಿದ್ದೇನೆ ಎಂದು ಕಂಧಮಲ್ ಸಿಟಿಜನ್ ಫೋರಂನ ಅಧ್ಯಕ್ಷ ಅರೂಪ್ ಜೆನಾ ಹೇಳಿದ್ದಾರೆ.


ಆಗಸ್ಟ್ 2016 ರಲ್ಲಿ, ಬುಡಕಟ್ಟು ಕೃಷಿಕ ದಾನಾ ಮಾಜಿ ಎಂಬವರ ಹೆಂಡತಿಯ ಶವವನ್ನು ಕಲಹಂಡಿ ಜಿಲ್ಲೆಯ ಭವಾನಿಪಟ್ನ ಪಟ್ಟಣದ ಜಿಲ್ಲಾ ಕೇಂದ್ರ ಆಸ್ಪತ್ರೆಯಿಂದ 10 ಕಿ.ಮೀ ದೂರದವರೆಗೆ ಬೆನ್ನಿನ ಮೇಲೆ ಹೊತ್ತು ಕೊಂಡು ಹೋದ ಘಟನೆ ದೇಶಾದ್ಯಂತ ಸುದ್ದಿಯಾಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರವು ಅದೇ ತಿಂಗಳಲ್ಲಿ ಶವ ಸಾಗಣೆಗೆ ಉಚಿತ ವಾಹನ ಯೋಜನೆಯನ್ನು ಪ್ರಾರಂಭಿಸಿತ್ತು.

Join Whatsapp