Home ಕರಾವಳಿ ಅಧಿಕಾರ ಆಳಲಿಕ್ಕಲ್ಲ, ಜನರ ಸೇವೆಗೆ ಸಿಕ್ಕಿದ ಅವಕಾಶ : ಡಾ.ಕುಮಾರ್

ಅಧಿಕಾರ ಆಳಲಿಕ್ಕಲ್ಲ, ಜನರ ಸೇವೆಗೆ ಸಿಕ್ಕಿದ ಅವಕಾಶ : ಡಾ.ಕುಮಾರ್

►ಅಧಿಕಾರಿಗಳು ಹಾಗೂ ಸಿಬ್ಬಂದಿ ವತಿಯಿಂದ ದ.ಕ.ಜಿ.ಪಂ. ನಿರ್ಗಮಿತ ಸಿಇಒ ಡಾ.ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಅಧಿಕಾರ ಆಳಲು ಅಲ್ಲ, ಜನಸಾಮಾನ್ಯರ ಸೇವೆ ಮಾಡಲು ಎಂಬುದನ್ನು ಅರ್ಥಮಾಡಿಕೊಂಡು ಮುಖದಲ್ಲಿ ನಗು ಹಾಗೂ ಆತ್ಮದಲ್ಲಿ ಸಂತೋಷ ಇಟ್ಟು ಕೆಲಸ ಮಾಡಿದಾಗ ತೃಪ್ತಿ ಸಿಗಲು ಸಾಧ್ಯವಿದೆ ಎಂದು ದ.ಕ.ಜಿ.ಪಂ. ನಿರ್ಗಮಿತ ಸಿಇಒ ಡಾ.ಕುಮಾರ್ ಹೇಳಿದರು.

ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವತಿಯಿಂದ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೂವರೆ ವರ್ಷ ಕೆಲಸ ಮಾಡುವ ಅವಕಾಶ ಲಭಿಸಿದೆ. ಜಿಲ್ಲೆಯನ್ನು ಆಡಳಿತಾತ್ಮಕ, ಭೌಗೋಳಿಕ ಭಾವನಾತ್ಮಕವಾಗಿ ನೋಡಿ ಅನುಭವಿಸಿದ್ದೇನೆ. ಜಿಲ್ಲೆಯಲ್ಲಿ ಪ್ರಜ್ಞಾವಂತರಿದ್ದಾರೆ, ಜತೆಗೆ ಹೃದಯವಂತರೂ ಇದ್ದಾರೆ. ಇಲ್ಲಿನ ಜನರೊಂದಿಗೆ ಬೆರೆತು ಕಲಿತಿದ್ದೇನೆ. ಜಿಲ್ಲೆಯೇ ನನ್ನ ಕುಟುಂಬ ಅಂತ ಭಾವನೆ ಎಷ್ಟೋ ಸಲ ಬಂದಿದೆ. ಪಾಸಿಟಿವ್ ಎನರ್ಜಿಯನ್ನು ಜಿಲ್ಲೆಯಲ್ಲಿ ಅನುಭವಿಸಿದ್ದೇನೆ.

ಹೂವಿನ ಮಾಲೆ, ಹೂಗುಚ್ಛ ನೀಡಿ ಹರಸಿದ್ದೀರಿ. ಹೂವು ಹಗುರ ಇರಬಹುದು. ಅದರ ಹಿಂದೆ ಇರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ನೀಡಲಾಗದು. ಎಷ್ಟೇ ಬುದ್ದಿವಂತರಾದರೂ ಆಡಳಿತ ನಿರ್ವಹಣೆಗೆ ಎಲ್ಲರ ಸಹಕಾರ ಬೇಕು. ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸವೇ ಮುಂದಿನ ವೃತ್ತಿ ಬದುಕಿಗೆ ಪ್ರೇರಣೆಯಾಗಲಿದೆ.

ಪಡೆಯುವ ಸಂಬಳದ ಜತೆ ಉತ್ತಮ ಮೌಲ್ಯ ಇಟ್ಟುಕೊಂಡು ಕೆಲಸ ಮಾಡಿದಾಗ ಅದಕ್ಕೆ ಅರ್ಥ ಬರುತ್ತದೆ. ಜವಾಬ್ದಾರಿ ಜತೆ ಹೊಣೆಗಾರಿಕೆ ಇರಬೇಕು. ಒಳ್ಳೆಯತನ ಮತ್ತು ಒಳ್ಳೆಯ ಕೆಲಸ ಕೊನೇ ತನಕ ಉಳಿಯುತ್ತದೆ. ಬದುಕಿನಲ್ಲಿ ಎಂದೂ ಬೀಗಬಾರದು, ಬಾಗಬೇಕು ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ಎಲ್ಲರೂ ನೀಡಿದ ಪ್ರೀತಿ, ವಿಶ್ವಾಸ ಮುಂದಿನ ಬದುಕಿಗೆ ಪ್ರೇರಣೆಯಾಗಿದೆ ಎಂದರು.

4 ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ:

287 ಬಸ್ ನಿಲ್ದಾಣಗಳಲ್ಲಿ ನಿರ್ಮಿಸಿದ ಪುಸ್ತಕ ಗೂಡು ಮುಂದುವರಿಯಬೇಕು. ಹೃದಯ ವೈಶಾಲ್ಯ ಯೋಜನೆಯಲ್ಲಿ 137 ಗ್ರಾಪಂಗೆ ಉಚಿತ ಇಸಿಜಿ ಯಂತ್ರ ನೀಡಿದ್ದೇವೆ. ಅದು ಸದ್ಬಳಕೆಯಾಗಬೇಕು. ಕೋವಿಡ್ ವೇಳೆ ಎಲ್ಲರೂ ಉತ್ತಮ ಕೆಲಸ ಮಾಡಿದ್ದಾರೆ. ಮನೋಸ್ಥೈರ್ಯ ಯೋಜನೆ ಮೂಲಕ ಮಕ್ಕಳಲ್ಲಿ ಹೆಲ್ದಿ ಮೈಂಡ್ ಬೆಳೆಸಲು ಸಹಕಾರಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಮ್ಯಾಥ್ಸ್ ಸೈನ್ಸ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ಮಾಡಿದ್ದೇವೆ. ಸ್ವಚ್ಚ ಸಂಸ್ಕೃತಿ ಮೂಲಕ 168 ಕಿ.ಮೀ, 15 ಸಾವಿರ ಸ್ವಯಂ ಸೇವಕರ ಮೂಲಕ ಸ್ವಚ್ಛತೆ ಮಾಡಲಾಗಿದೆ. 223 ಗ್ರಾ.ಪಂ. ಕಸ ವಿಲೇವಾಗಿಗೆ ಎಂಆರ್‌ಎಫ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನನ್ನ ಅವಧಿಯಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದಿದ್ದು, ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಡಾ.ಕುಮಾರ್ ಹೇಳಿದರು.


ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಉತ್ತಮ ಅವಕಾಶವಿದೆ. ಡಾ.ಕುಮಾರ್ ಅವರು ಉತ್ತಮ ಕೆಲಸ ಮಾಡಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾಪ್ರಸಾದ್,ರಾಮಕೃಷ್ಣ ಮಠದ ರಂಜನ್ ಬೆಳ್ಳರ್ಪಾಡಿ, ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲಾ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ, ನಿಸರ್ಗ ಪಬ್ಲಿಸಿಟಿಯ ಮಂಜುನಾಥ್ ಮೊದಲಾದವರು ಡಾ.ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಸಹಾಯಕ ಆಯುಕ್ತರಾದ ಗಿರಿನಂದನ್, ರಾಜು ಕೆ., ಜಿಪಂ ಯೋಜನಾ ನಿರ್ದೇಶಕ ಜಯರಾಮ್, ಸಿಪಿಒ ಸಂಧ್ಯಾ, ಮನಪಾ ಪ್ರಭಾರ ಆಯುಕ್ತ ರವಿಕುಮಾರ್ ಉಪಸ್ಥಿತರಿದ್ದರು.

ಜಿ.ಪಂ ಉಪಕಾರ್ಯದರ್ಶಿ ಆನಂದ್ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ವಂದಿಸಿದರು.

ದ.ಕನ್ನಡದಲ್ಲಿ ಮೂರನೇ ಬಾರಿಗೆ ಬೀಳ್ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕೂವರೆ ವರ್ಷ ಅಪರ ಜಿಲ್ಲಾಧಿಕಾರಿ ಹಾಗೂ ಎರಡು ವರ್ಷ ಜಿಪಂ ಸಿಇಒ ಆಗಿ ಒಟ್ಟು ಆರೂವರ್ಷ ಕೆಲಸ ನಿರ್ವಹಿಸಿದ್ದೇನೆ. ಅಪರ ಜಿಲ್ಲಾಧಿಕಾರಿಯಾಗಿ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡು ಹೋದಾಗ ಮೊದಲ ಬಾರಿಗೆ ಸನ್ಮಾನಿಸಿ, ಬೀಳ್ಕೊಟ್ಟಿದ್ದರು. ಮತ್ತೆ ದ.ಕ. ಜಿಲ್ಲೆಗೆ ಅದೇ ಹುದ್ದೆಗೆ ಮರು ನಿಯೋಜನೆಗೊಂಡಿದ್ದೆ. ಎರಡನೇ ಬಾರಿಗೆ ವರ್ಗಾವಣೆಗೊಂಡು ಹೋದಾಗ ಮತ್ತೆ ಸನ್ಮಾನಿಸಿ, ಬೀಳ್ಕೊಟ್ಟಿದ್ದರು. ಈಗ ಸಿಇಒ ಸ್ಥಾನದಿಂದ ಮಂಡ್ಯ ಜಿಲ್ಲಾಧಿಕಾರಿ ಸ್ಥಾನಕ್ಕೆ ತೆರಳುತ್ತಿದ್ದು, ಮೂರನೇ ಬಾರಿಗೆ ಬೀಳ್ಕೊಡುಗೆ ಸಂದಿದೆ ಎಂದು ಡಾ.ಕುಮಾರ್ ಹೇಳಿದರು.

Join Whatsapp
Exit mobile version