ಬೆಂಗಳೂರು: ಪಾರದರ್ಶಕತೆ ವಿಚಾರವನ್ನು ಬೋಧನೆಗೆ ಸೀಮಿತಗೊಳಿಸದೇ ತಮ್ಮ ಮತ್ತು ಕುಟುಂಬದ ಆಸ್ತಿ ವಿವರಗಳನ್ನು ಪ್ರತ್ಯೇಕ ವೆಬ್’ಸೈಟ್ ರೂಪಿಸಿ, ಅದರಲ್ಲಿ ಪ್ರಕಟಿಸುವ ಮೂಲಕ ಮೇಲ್ಪಂಕ್ತಿ ಹಾಕಿದ್ದಲ್ಲದೇ ರಾಷ್ಟ್ರಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡೆಂಕಣಕೋಟೆ ವೀರೇಂದ್ರ ಕುಮಾರ್ (ಡಿ ವಿ) ಶೈಲೇಂದ್ರ ಕುಮಾರ್ ಅವರು ಶುಕ್ರವಾರ ವಿಧಿವಶರಾಗಿದ್ದಾರೆ.
ಖಡಕ್ ನ್ಯಾಯಮೂರ್ತಿ ಎಂದೇ ಖ್ಯಾತರಾಗಿದ್ದ ʼಡಿವಿಎಸ್ʼ ಅವರಿಗೆ 72 ವರ್ಷ ವಯಸ್ಸಾಗಿತ್ತು.
1951ರ ಸೆಪ್ಟೆಂಬರ್ 5ರಂದು ಜನಿಸಿದ್ದ ನ್ಯಾ. ಕುಮಾರ್ ಅವರು 1976ರ ಜೂನ್ 30ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದು, ಮದ್ರಾಸ್ ಮತ್ತು ಕರ್ನಾಟಕ ಹೈಕೋರ್ಟ್‌ಗಳಲ್ಲಿ ಒಟ್ಟು 24 ವರ್ಷ ಪ್ರಾಕ್ಟೀಸ್ ಮಾಡಿದ್ದರು. ಮದ್ರಾಸ್’ನಲ್ಲಿ ಖ್ಯಾತ ವಕೀಲರಾಗಿದ್ದ ಎಸ್ ಪರಾಶರನ್ ಅವರ ಜೂನಿಯರ್ ಆಗಿ ಕೆಲಸ ಆರಂಭಿಸಿದ್ದರು. ಕರ್ನಾಟಕದಲ್ಲಿ ನ್ಯಾ. ರಾಜಶೇಖರ ಮೂರ್ತಿ ಅವರ ಅಡಿ ಪ್ರಾಕ್ಟೀಸ್ ಮಾಡಿದ್ದರು.
ಕೇಂದ್ರ ಸರ್ಕಾರದ ವಕೀಲರಾಗಿಯೂ ಕೆಲಸ ಮಾಡಿದ್ದ ಡಿವಿಎಸ್ ಅವರು ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್ ವಿಷಯಗಳಲ್ಲಿ ನೈಪುಣ್ಯತೆ ಸಾಧಿಸಿದ್ದರು.
ಇದಕ್ಕೂ ಮುನ್ನ, ಎಸ್’ಜೆ’ಆರ್‌ಸಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
2000ದ ಡಿಸೆಂಬರ್ 11ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, 2002ರ ಏಪ್ರಿಲ್ 18ರಂದು ಕಾಯಂಗೊಂಡಿದ್ದರು. 2013ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಿದ್ದ ಡಿವಿಎಸ್ ಅವರು ಒಟ್ಟು 13 ವರ್ಷ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
ಅಕ್ರಮ ಭೂ ಕಬಳಿಕೆ ಆರೋಪಕ್ಕೆ ಗುರಿಯಾಗಿದ್ದ ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸುವ ಮೂಲಕ ಪೂರ್ಣ ನ್ಯಾಯಾಲಯ ಸಭೆಯನ್ನು ನ್ಯಾಯಮೂರ್ತಿ ಕುಮಾರ್ ಆಗ್ರಹಿಸಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಬೆಂಬಲ ನೀಡದಿದ್ದಾಗ ಪ್ರತ್ಯೇಕವಾಗಿ ತಾವು ರೂಪಿಸಿದ್ದ ವೆಬ್’ಸೈಟ್’ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದರು.
ತಮ್ಮ ಆಸ್ತಿ ವಿವರವನ್ನು ಹೈಕೋರ್ಟ್ ವೆಬ್’ಸೈಟ್’ನಲ್ಲಿ ಪ್ರಕಟಿಸಲು ರಿಜಿಸ್ಟ್ರಾರ್ ಜನರಲ್ ಅವರಿಗೆ ಅನುಮತಿ ಕೋರಿದ್ದರು. ಇದಕ್ಕೆ ಅನುಮತಿ ಸಿಗದಿದ್ದಾಗ ತಮ್ಮದೇ ವೈಯಕ್ತಿಕ ವೆಬ್’ಸೈಟ್ ರೂಪಿಸಿ, ತಮ್ಮ ಮತ್ತು ಕುಟುಂಬದ ಆಸ್ತಿಯ ವಿವರವನ್ನು ಬಹಿರಂಗಪಡಿಸುವ ಮೂಲಕ ಮೇಲ್ಪಂಕ್ತಿ ಹಾಕಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದು, ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಸೇರಿದಂತೆ ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಕಾರಣರಾಗಿದ್ದರು. ಇದೇ ಹಾದಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಪಾಲಿಸಿದ್ದರು.
ನ್ಯಾಯಮೂರ್ತಿಯಾಗಿದ್ದ ಡಿವಿಎಸ್ ಅವರು ಯಾವುದೇ ರೀತಿಯ ಉಡುಗೊರೆ ಸ್ವೀಕರಿಸುತ್ತಿರಲಿಲ್ಲ. ಹೂಗುಚ್ಛ ನೀಡಿದರೂ ನಯವಾಗಿ ತಿರಸ್ಕರಿಸುತ್ತಿದ್ದರು ಎಂಬುದು ವಕೀಲರ ಅಭಿಪ್ರಾಯ.
ಹಲವು ಮಹತ್ವದ ಪ್ರಗತಿಪರ ತೀರ್ಪುಗಳ ಮೂಲಕ ಹೆಸರು ಗಳಿಸಿದ್ದ ನ್ಯಾ. ಕುಮಾರ್ ಅವರು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪುರುಷರಂತೆ ಮಹಿಳೆಯರೂ ದುಡಿಯಲು ಅರ್ಹರು. ಸಂವಿಧಾನದ 14ನೇ ವಿಧಿಯಡಿ ಎಲ್ಲರೂ ಸಮಾನರು ಎಂದು ಮಹತ್ವದ ಆದೇಶ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
(ಕೃಪೆ: ಬಾರ್ & ಬೆಂಚ್)