Home ಕರಾವಳಿ ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ

ಮಂಗಳೂರು: ಯಕ್ಷಗಾನದ ಹೆಸರಾಂತ ಭಾಗವತ, ಕಂಚಿನ ಕಂಠದ ‘ಬಲಿಪ ಶೈಲಿ’ಯ ಹಾಡುಗಾರಿಕೆಗೆ ಖ್ಯಾತವಾಗಿರುವ ಬಲಿಪ ನಾರಾಯಣ ಭಾಗವತ ಅವರು ಗುರುವಾರ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು.

ಬಲಿಪ ನಾರಾಯಣ ಭಾಗವತರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ನೆಲೆಸಿದ್ದರು.

ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರರಾದ ಅವರು, ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದರು.

13ನೇ ವಯಸ್ಸಿಗೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದ ಅವರು, ಯಕ್ಷ ರಂಗದ ಭೀಷ್ಮ ಎಂಬ ಖ್ಯಾತಿಯನ್ನು ಗಳಿಸಿದ್ದರು.

60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಬಲಿಪರು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಅಜ್ಜ ಬಲಿಪ ನಾರಾಯಣ ಭಾಗವತರೂ ಯಕ್ಷಗಾನದ ಹೆಸರಾಂತ ಭಾಗವತರಾಗಿದ್ದು, ಬಲಿಪ ಶೈಲಿಯ ಹಾಡುಗಾರಿಕೆಯನ್ನು ‌ಹುಟ್ಟು ಹಾಕಿದ್ದರು. ಮೃತರ ಇಬ್ಬರು ಪುತ್ರರಾದ ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪ ಅವರೂ ಭಾಗವತರಾಗಿ ಈ ಶೈಲಿಯನ್ನು ಮುಂದುವರಿಸಿದ್ದಾರೆ.

Join Whatsapp
Exit mobile version