Home ಜಾಲತಾಣದಿಂದ ಇತಿಹಾಸದಲ್ಲಿ ಇಲ್ಲದ ಉರಿಗೌಡ ನಂಜೇಗೌಡ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ: ಒಕ್ಕಲಿಗರ ಸಂಘ ಆಕ್ರೋಶ

ಇತಿಹಾಸದಲ್ಲಿ ಇಲ್ಲದ ಉರಿಗೌಡ ನಂಜೇಗೌಡ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ: ಒಕ್ಕಲಿಗರ ಸಂಘ ಆಕ್ರೋಶ

ಬೆಂಗಳೂರು: ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಂಘದ ಅಧ್ಯಕ್ಷರೂ ಆಗಿರುವ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹುನ್ನಾರವೇನೆಂದು ಪ್ರಶ್ನಿಸಿದ್ದಾರೆ. ಈ ರೀತಿಯ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಹತ್ತಿರದಲ್ಲಿರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ ಎಂದು ಹೇಳಿದ್ದಾರೆ.

ಕೆಲವರು ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಯಾರಿದ್ದಾರೋ ಅಂತಹವರನ್ನು ಪತ್ತೆ ಹಚ್ಚಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಬಾಲಕೃಷ್ಣ, ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಮಹಾದ್ವಾರ ಎಂದು ಹಾಕಲಾಗಿದ್ದ ಬ್ಯಾನರ್​ ರಾಜ್ಯ ರಾಜಕಾರಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ರೋಡ್ ಶೋ ನಡೆಸುವ ಮಾರ್ಗದಲ್ಲಿ ಉರಿಗೌಡ ಹಾಗೂ ದೊಡ್ಡ ಮಂಜೇಗೌಡ ಮಹಾದ್ವಾರ ಎಂದು ಕಟೌಟ್​ ಹಾಕಲಾಗಿತ್ತು. ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ‌ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ‌ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಜೆಡಿಎಸ್ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ವಾಗ್ದಾಳಿ ನಡೆಸಿತ್ತು. ಆದರೆ ಆಡಳಿತ ಪಕ್ಷ ಬಿಜೆಪಿಯು, ಟಿಪ್ಪು ಕೊಂದವರು ಇವರೇ ಎಂದು ವಾದಿಸುತ್ತಿದೆ.

Join Whatsapp
Exit mobile version