ಆಸ್ಟ್ರೇಲಿಯಾ ನೂತನ ಪ್ರಧಾನಿ ವಿಶ್ವ ಹಿಂದೂ ಪರಿಷತ್ ಬೆಂಬಲಿಗನೆಂಬ ಸುಳ್ಳು ಸುದ್ದಿ: ಫ್ಯಾಕ್ಟ್ ಚೆಕ್
Prasthutha: May 25, 2022

ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಲೇಬರ್ ಪಕ್ಷದ ಆಂಥೋನಿ ಅಲ್ಬನೀಸ್ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗೆ ಬೆಂಬಲಿಸಿ ಅದರ ಶಾಲು ಧರಿಸಿದ್ದಾರೆ ಎಂಬ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿವೆ.
ಮೇ 21 ರಂದು ನಡೆದ ಚುನಾವಣೆಯಲ್ಲಿ ಆಸ್ಟ್ರೇಲಿಯಾದ ಲಿಬರಲ್ ಪಾರ್ಟಿಯ ಸ್ಕಾಟ್ ಮಾರಿಸನ್ ಅವರನ್ನು ಸೋಲಿಸಿದ ನಂತರ ಅಲ್ಬನೀಸ್ ಒಬ್ಬ ಹುಡುಗನೊಂದಿಗೆ ಕೇಸರಿ ಬಣ್ಣದ ಶಾಲು ಧರಿಸಿರುವುದನ್ನು ತೋರಿಸುತ್ತಾ ಅದರ ಅಡಿಯಲ್ಲಿ “ಏತನ್ಮಧ್ಯೆ ಆಸ್ಟ್ರೇಲಿಯಾದ ಹೊಸ ಪ್ರಧಾನಿ ವಿಎಚ್ಪಿಯ ಶಾಲು ಧರಿಸಿದ್ದಾರೆ” ಎಂದು ಬರೆಯಲಾಗಿದೆ.

ಆದರೆ ಖಚಿತ ಮಾಹಿತಿಗಳ ಪ್ರಕಾರ ಇದು ಗೆಲುವಿನ ನಂತರ ವಿಜಯಾಚರಣೆಯ ಸಂಧರ್ಭದಲ್ಲಿ ಸೆರೆಹಿಡಿದ ಚಿತ್ರವಲ್ಲ ಎಂದು ತಿಳಿದು ಬಂದಿದ್ದು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಅಲ್ಬನೀಸ್, ಇತರ ಲೇಬರ್ ಪಕ್ಷದ ನಾಯಕರೊಂದಿಗೆ ಮೇ 7 ರಂದು ಆಸ್ಟ್ರೇಲಿಯಾದ ಹಿಂದೂ ಕೌನ್ಸಿಲ್ಗೆ ಭೇಟಿ ನೀಡಿದ ಸಮಯದಲ್ಲಿ ಸೆರೆಹಿಡಿಯಲಾದ ಚಿತ್ರ ಎಂದು ದೃಡಪಟ್ಟಿದೆ.
ಅಲ್ಬನೀಸ್ ತಮ್ಮ ಟ್ವಿಟ್ಟರ್ನಲ್ಲಿ ಅದೇ ದಿನ, ಆ ಘಟನೆಯ ಫೋಟೋಗಳೊಂದಿಗೆ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
