ನವದೆಹಲಿ: 13 ವರ್ಷಗಳ ಹಿಂದಿನ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಖಾತೆ ಸಚಿವ ನಿಸಿತ್ ಪ್ರಮಾಣಿಕ್ ವಿರುದ್ಧ ಅಲಿಪುರ್’ದೌರ್’ನ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ನವೆಂಬರ್ 11ರಂದು ಅಲಿಪುರ್’ದೌರ್’ನ ಮೂರನೇ ನ್ಯಾಯಾಲಯವು ನಿಸಿತ್ ಪ್ರಮಾಣಿಕ್ ವಿರುದ್ಧ ಐಪಿಸಿ ಸೆಕ್ಷನ್ 457, 383, 411ರ ಅಡಿಯಲ್ಲಿ ಬಂಧನ ವಾರಂಟ್ ಹೊರಡಿಸಿದೆ. ಈ ಘಟನೆ 2009ರಲ್ಲಿ ಅಲಿಪುರ್’ದೌರ್’ನಲ್ಲಿ ನಡೆದಿತ್ತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ನಾರಾಯಣ್ ಮಜುಂದಾರ್ ತಿಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್’ನ ನಿರ್ದೇಶನದ ಮೇರೆಗೆ ಬರಸಾತ್’ನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಅಲಿಪುರ್’ದೌರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಯಿತು ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ನವೆಂಬರ್ 11ರಂದು ಈ ಪ್ರಕರಣದ ಇತರ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನಿಸಿತ್ ಪ್ರಮಾಣಿಕ್ ಕಡೆಯಿಂದ ಅಂತಹ ಯಾವುದೇ ಕ್ರಮ ಕಂಡುಬಂದಿಲ್ಲ ಎಂದು ನಾರಾಯಣ್ ಮಜುಂದಾರ್ ತಿಳಿಸಿದ್ದಾರೆ. ಯಾವುದೇ ವಕೀಲರ್ಯ್ ಬಿಹಾರದ ಬಿಜೆಪಿ ಸಂಸದರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಬೇಕು ಎಂದು ಸರ್ಕಾರಿ ವಕೀಲರು ಒತ್ತಾಯಿಸಿದ್ದರು.
ಈ ಮಧ್ಯೆ ಕಳೆದ ವರ್ಷ ಪೌರತ್ವ ವಿವಾದದಲ್ಲಿ ಪ್ರಮಾಣಿಕ್ ಅವರು ಇಕ್ಕಟ್ಟಿಗೆ ಸಿಲುಕಿದ್ದರು. ಆಗ ಕಾಂಗ್ರೆಸ್ ನಾಯಕ ರಿಪುನ್ ಬೋರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪ್ರಮಾಣಿಕ್ ಅವರು ಬಾಂಗ್ಲಾದೇಶಿಯಾಗಿದ್ದು, ಅವರ ರಾಷ್ಟ್ರೀಯತೆಯ ಬಗ್ಗೆ ತನಿಖೆ ನಡೆಸಬೇಕು ಆಗ್ರಹಿಸಿದ್ದರು. ಆದರೆ ಬಿಜೆಪಿಯು ಕಾಂಗ್ರೆಸ್ ನ ಆರೋಪವನ್ನು ನಿರಾಕರಿಸಿತ್ತು.