►ಪ್ರಸ್ತುತ ನ್ಯೂಸ್ ನಲ್ಲಿ ಮಾತ್ರ ಈ ಸುದ್ದಿ
ಮಂಗಳೂರು : ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಸಂಬಂಧ ಪ್ರಸ್ತುತ ನ್ಯೂಸ್ ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ಪರಿಸರದಲ್ಲಿ ಯಾರಾದರೂ ಮುಸ್ಲಿಮರನ್ನು ಕೊಲ್ಲಲು ಆರ್ ಎಸ್ ಎಸ್ ಯೋಜನೆ ರೂಪಿಸಿತ್ತು ಎಂದು ತಿಳಿದುಬಂದಿದೆ.
ಈ ಪ್ರತೀಕಾರದ ಕೊಲೆಯ ಉಸ್ತುವಾರಿಯನ್ನು ಕೋಡಿಕೆರೆಯ ಬಜರಂಗದಳದ ಮುಖಂಡನೊಬ್ಬನಿಗೆ ವಹಿಸಲಾಗಿದ್ದು, ಆತನ ತಂಡ ಸುರತ್ಕಲ್ ಮುಸ್ಲಿಂ ಉದ್ಯಮಿಯೊಬ್ಬರನ್ನು ಗುರಿ ಮಾಡಿ ಕೊಲೆ ಮಾಡಲು ಸಂಚು ನಡೆಸಿತ್ತು. ಫಾಝಿಲ್ ನ ಕೊಲೆ ಮಾಡುವ ಮುನ್ನ ಬಜರಂಗದಳದ ಹಂತಕರ ತಂಡ ಆ ಮುಸ್ಲಿಂ ಉದ್ಯಮಿಯ ಚಲವಲನಗಳ ಮೇಲೆ ಇಡೀ ದಿನ ಕಣ್ಣಿಟ್ಟಿತ್ತು. ಈ ಮಾಹಿತಿ ತಿಳಿದ ಮುಸ್ಲಿಂ ಉದ್ಯಮಿ ಎಚ್ಚರಿಕೆ ವಹಿಸಿ ಹಂತಕರ ಕೈಗೆ ಸಿಗದೆ ಪಾರಾಗಿದ್ದರು. ಮಧ್ಯಾಹ್ನದಿಂದ ಒಂದು ತಂಡ ತನ್ನನ್ನು ಫಾಲೋ ಮಾಡಿರುವ ಬಗ್ಗೆ ಸುರತ್ಕಲ್ ಪೊಲೀಸರಿಗೂ ಮಾಹಿತಿ ನೀಡಿದ್ದರು ಎನ್ನಲಾಗಿದೆ. ನೀವು ಎಚ್ಚರ ವಹಿಸಿ ಎಂದು ಪೊಲೀಸರು ಆ ಮುಸ್ಲಿಂ ಉದ್ಯಮಿಗೆ ಹೇಳಿದ್ದು ಸೂಕ್ತ ಬಂದೋಬಸ್ತ್ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಮುಸ್ಲಿಮನೊಬ್ಬನ ಕೊಲೆಗೆ ಯೋಜನೆ ರೂಪಿಸಿದ್ದ ಬಜರಂಗದಳದ ತಂಡಕ್ಕೆ ರಾತ್ರಿಯೊಳಗೆ ಯಾರನ್ನಾದರೂ ಕೊಲ್ಲಲೇಬೇಕಿತ್ತು. ಆದರೆ ತಾವು ಟಾರ್ಗೆಟ್ ಮಾಡಿದ್ದ ಮುಸ್ಲಿಂ ಉದ್ಯಮಿ ಕೈಗೆ ಸಿಗದಿದ್ದರಿಂದ ಫಾಝಿಲ್ ಅವರನ್ನು ಕೊಂದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬಿಳಿಬಣ್ಣದ ಕಾರಿನಲ್ಲಿ ನಾಲ್ವರು ಹಂತಕರು ಬಂದಿದ್ದು, ಮತ್ತೊಂದು ಕಪ್ಪು ಬಣ್ಣದ ಕಾರ್ ನಲ್ಲಿ ಇನ್ನೊಂದು ಟೀಂ ಇತ್ತು ಎಂಬ ಮಾಹಿತಿಯೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿದೆ. ಅಲ್ಲದೇ ಬಜರಂಗದಳದ ಇಬ್ಬರು ಮಾಹಿತಿದಾರರಾಗಿ ಕೊಲೆ ನಡೆದ ಸ್ಥಳದಲ್ಲಿ ಇದ್ದರು ಎಂಬ ಮಾಹಿತಿಯೂ ಇದೆ.
ಈ ಮಾಹಿತಿಗಳೆಲ್ಲವೂ ತನಿಖೆ ವೇಳೆ ಪೊಲೀಸರಿಗೂ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮೂಲಗಳ ಪ್ರಕಾರ ಫಾಝಿಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ಇವತ್ತೇ ಬಜರಂಗದಳದ ಸುಹಾಸ್, ಪ್ರೀತು ಸೇರಿದಂತೆ ಇನ್ನಿತರ ಆರೋಪಿಗಳ ಬಂಧನವನ್ನು ದೃಢಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.