ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿಬಿ) ಮತ್ತಷ್ಟು ಶಾಕ್ ನೀಡಿದೆ. ಇಂದು ಬೆಳಗ್ಗೆ ಎನ್ ಸಿಬಿ ಅಧಿಕಾರಿಗಳ ತಂಡ ಅವರ ಮುಂಬೈಯಲ್ಲಿರುವ ನಿವಾಸ ಮನ್ನತ್ ಮೇಲೆ ದಾಳಿ ನಡೆಸಿದ್ದಾರೆ.
ಶಾರೂಕ್ ಪುತ್ರ ಅಕ್ಟೋಬರ್ 3ರಂದು ಮುಂಬೈಯ ಕಡಲ ತೀರದಲ್ಲಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ ವೇಳೆ ಸಿಕ್ಕಿಬಿದ್ದು ಈಗ ಅರ್ಥೂರ್ ರೋಡ್ ಜೈಲಿನಲ್ಲಿದ್ದಾನೆ. ಆತನ ಜಾಮೀನು ಅರ್ಜಿ ವಿಚಾರಣೆ ಇದೇ 26ರಂದು ಮುಂಬೈ ಹೈಕೋರ್ಟ್ ನಲ್ಲಿ ನಡೆಯಲಿರುವುದರ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ಎನ್ ಸಿಬಿ ಅಧಿಕಾರಿಗಳು ಯಾವ ಮಾಹಿತಿಯನ್ನು ಕಲೆ ಹಾಕಲು ಶಾರೂಕ್ ಖಾನ್ ನಿವಾಸಕ್ಕೆ ಆಗಮಿಸಿದ್ದಾರೆ, ನಟನ ಮನೆಯಲ್ಲಿ ಏನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಪೂರ್ಣ ಮಾಹಿತಿ ಸಿಕ್ಕಿಲ್ಲ. ಅವರ ಪುತ್ರ ಆರ್ಯನ್ ಖಾನ್ ಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕವಿತ್ತು ಎಂಬ ಆರೋಪವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ, ಸಾಕ್ಷ್ಯ ಕಲೆಹಾಕಲು ಇಂದಿನ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಎನ್ ಸಿಬಿಯ ಡ್ರಗ್ ವಿರೋಧಿ ತಂಡ ನಟಿ ಅನನ್ಯಾ ಪಾಂಡೆ ನಿವಾಸಕ್ಕೆ ಕೂಡ ಆಗಮಿಸಿ ಶೋಧ ಕಾರ್ಯ ನಡೆಸಿದೆ. ಮಧ್ಯಾಹ್ನ ವಿಚಾರಣೆಗೆ ಬರುವಂತೆ ಆಕೆಗೆ ಸಮನ್ಸ್ ನೀಡಿದ್ದಾರೆ.
ನಟಿ ಅನನ್ಯಾ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸ್ನೇಹಿತೆಯಾಗಿದ್ದು, ಆಕೆಯ ಜೊತೆ ಆರ್ಯನ್ ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಾಪ್ ಚಾಟ್ ನಡೆಸಿದ್ದು ಆತನ ಮೊಬೈಲ್ ನಲ್ಲಿ ಸಿಕ್ಕಿದೆ. ಸಂಬಂಧವಾಗಿ ಎನ್ ಸಿಬಿ ವಿಚಾರಣೆಗೆ ಕರೆದಿದೆ ಎಂದು ಹೇಳಲಾಗುತ್ತಿದೆ. ನಟಿ ಅನನ್ಯಾ ಪಾಂಡೆ ಬಾಲಿವುಡ್ ನಟ ಚಂಕಿ ಪಾಂಡೆಯವರ ಪುತ್ರಿಯಾಗಿದ್ದಾಳೆ.
ಇಂದು ಬೆಳಗ್ಗೆ ಮುಂಬೈಯ ಅರ್ಥೂರ್ ರೋಡ್ ಜೈಲಿನಲ್ಲಿರುವ ಪುತ್ರನನ್ನು ಭೇಟಿ ಮಾಡಲು ನಟ ಶಾರೂಕ್ ಖಾನ್ ತೆರಳಿದ್ದರು.ಇದಾದ ಬೆನ್ನಲ್ಲೇ ಈ ದಾಳಿ ನಡೆದಿದೆ.