Home ಟಾಪ್ ಸುದ್ದಿಗಳು ಮಕ್ಕಳ ಆರೋಗ್ಯದ ಬಗ್ಗೆ ತಜ್ಞರ ಸಲಹಾ ವರದಿಯನ್ನು ಕೂಡಲೇ ಹಿಂಪಡೆಯಬೇಕು, ನಿಮ್ಹಾನ್ಸ್ ಅನ್ನು ಉಳಿಸಬೇಕು: ತಜ್ಞ...

ಮಕ್ಕಳ ಆರೋಗ್ಯದ ಬಗ್ಗೆ ತಜ್ಞರ ಸಲಹಾ ವರದಿಯನ್ನು ಕೂಡಲೇ ಹಿಂಪಡೆಯಬೇಕು, ನಿಮ್ಹಾನ್ಸ್ ಅನ್ನು ಉಳಿಸಬೇಕು: ತಜ್ಞ ವೈದ್ಯರಿಂದ ಆಗ್ರಹ

►ಯೋಗಾಭ್ಯಾಸದಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಪ್ರಯೋಜನ ಇದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯ ಕ್ರಮ ಸಿದ್ಧತೆಗಳಿಗಾಗಿ ಕರ್ನಾಟಕದ ಡಿಎಸ್ ಇ ಆರ್ ಟಿ ಸಲ್ಲಿಸಿರುವ ಮಕ್ಕಳ ಆರೋಗ್ಯ ಹಾಗೂ ಕ್ಷೇಮಗಳ ಬಗೆಗಿನ ತಜ್ಞರ ಸಲಹಾ ವರದಿಯು ಹಳಸಾಗಿ, ಅವೈಜ್ಞಾನಿಕವಾಗಿ, ಅತಿರೇಕ ಹಾಗೂ ಬಾಲಿಶತದಿಂದ ಕೂಡಿದ್ದು, ಅದನ್ನು ಕೂಡಲೇ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ವೈದ್ಯಕೀಯ ಕ್ಷೇತ್ರದ ಗಣ್ಯರು ಆಗ್ರಹಿಸಿದ್ದಾರೆ.


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂಥದ್ದೊಂದು ಕೀಳಾದ, ಬೇಜವಾಬ್ದಾರಿಯ ವರದಿಯಲ್ಲಿ ನರಮಾನಸಿಕ ವಿಜ್ಞಾನದಲ್ಲಿ ಅಂತಾರಾಷ್ಟ್ರೀಯ ಮನ್ನಣೆಯನ್ನೂ, ಖ್ಯಾತಿಯನ್ನೂ ಪಡೆದಿರುವ, ನಮ್ಮ ದೇಶದ ಅತ್ಯುನ್ನತವಾದ ಗೌರವಾರ್ಹವಾದ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಹಾಗೂ ಹದಿಹರೆಯದ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಜಾನ್ ವಿಜಯ್ ಸಾಗರ್ ಅವರ ಹೆಸರನ್ನು ತಜ್ಞರ ಸಮಿತಿಯ ಅಧ್ಯಕ್ಷನೆಂದು ನೀಡಿರುವುದನ್ನು ಕಂಡು ಆ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದ ನಮಗೆ ಅತೀವ ಆಘಾತವೂ, ಬೇಸರವೂ ಆಗಿದೆ. ಮಕ್ಕಳ ಆರೋಗ್ಯದ ಬಗೆಗಿನ ಈ ತಜ್ಞರ ಸಮಿತಿಯಲ್ಲಿ ಒಬ್ಬರೇ ಒಬ್ಬ ಮಕ್ಕಳ ತಜ್ಞ ಇಲ್ಲದಿರುವುದು ಕಳವಳಕಾರಿಯಾಗಿದೆ ಎಂದು ಆಗ್ರಹಿಸಿದ್ದಾರೆ.


ಈ ವರದಿಯನ್ನು ಆಯುರ್ವೇದ ಹಾಗೂ ಯೋಗ ತಜ್ಞರೆಂದುಕೊಳ್ಳುವವರೇ ಬರೆದಿರುವಂತೆ ಕಾಣುತ್ತಿದ್ದು, ಅನೇಕ ಆಧಾರರಹಿತವಾದ, ಅಪಾಯಕಾರಿಯಾದ ವಿಚಾರಗಳನ್ನೇ ತುಂಬಿಸಲಾಗಿದೆ. ಆದ್ದರಿಂದ ನಿಮ್ಹಾನ್ಸ್ ನ ನಿರ್ದೇಶಕರು ಈ ಕೂಡಲೇ ತಮ್ಮ ಸಂಸ್ಥೆಯನ್ನು ಈ ವರದಿಗೆ ತಳುಕು ಹಾಕಿರುವುದನ್ನು ಕೊನೆಗೊಳಿಸಬೇಕು ಹಾಗೂ ಡಾ. ಜಾನ್ ವಿ ಸಾಗರ್ ಅವರು ತಜ್ಞರ ಸಮಿತಿಯ ಅಧ್ಯಕ್ಷತೆಗೆ ರಾಜೀನಾಮೆ ನೀಡಿ ಈ ವರದಿಯೊಡನೆ ತಮಗೆ ಸಂಬಂಧವಿಲ್ಲವೆಂದು ಸ್ಪಷ್ಟ ಪಡಿಸಬೇಕು. ನಿಮ್ಹಾನ್ಸ್ ನ ಎಲ್ಲಾ ತಜ್ಞರು ಹಾಗೂ ವಿದ್ಯಾರ್ಥಿಗಳು ಕೂಡ ತಮ್ಮ ಮೇರು ಸಂಸ್ಥೆಯ ಹೆಸರನ್ನು ಹೀಗೆ ದುರ್ಬಳಕೆ ಮಾಡಿ ಅವಮಾನಿಸುವುದನ್ನು ವಿರೋಧಿಸಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ.


ಮನುಷ್ಯರ ಆತ್ಮದ ಸುತ್ತಲೂ ಐದು ಕೋಶಗಳಿವೆ ಎಂದು ಈ ವರದಿಯಲ್ಲಿ ಹೇಳಲಾಗಿದ್ದು, ನಿಮ್ಹಾನ್ಸ್ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರಾಗಿದ್ದವರು ಈ ಐದು ಕೋಶಗಳ ಇರುವಿಕೆಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಈ ಕೂಡಲೇ ಒದಗಿಸಬೇಕು, ಇಲ್ಲವಾದರೆ ಈ ವರದಿಯನ್ನೇ ಹಿಂಪಡೆಯಬೇಕು. ಯೋಗಾಭ್ಯಾಸದಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಯಾವುದೇ ದೃಢವಾದ ಆಧಾರಗಳಿಲ್ಲದೆಯೇ ಈ ವರದಿಯಲ್ಲಿ ಹೇಳಲಾಗಿದೆ. ನಿಮ್ಹಾನ್ಸ್ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರು ಈ ಹೇಳಿಕೆಗಳಿಗೆ ದೃಢವಾದ ಸಾಕ್ಷ್ಯಾಧಾರಗಳನ್ನು ಈ ಕೂಡಲೇ ಒದಗಿಸಬೇಕು, ಇಲ್ಲವಾದರೆ ಈ ವರದಿಯನ್ನು ಹಿಂಪಡೆಯಬೇಕು. ಹಾಗೆ ಮಾಡದಿದ್ದರೆ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆಗೆ ಸಾಕ್ಷ್ಯಾಧಾರಿತ ವಿಧಾನಗಳನ್ನು ನಿರಾಕರಿಸಿದಂತಾಗಿ ತೊಂದರೆಯಾಗಬಹುದು. ಅದೇ ವರದಿಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಪಾಲನೆಯ ಬಗ್ಗೆ ಯುನಿಸೆಫ್ 2021ರಲ್ಲಿ ಪ್ರಕಟಿಸಿರುವ ವರದಿಯನ್ನು ಹೆಸರಿಸಲಾಗಿದ್ದರೂ, ಅದರಲ್ಲಿ ಯೋಗ ಅಥವಾ ಆಯುರ್ವೇದ ಎಂಬ ಪದಗಳೇ ಕಾಣಸಿಗುವುದಿಲ್ಲ, ಅದೇ ಕಾರಣಕ್ಕೆ ಆ ವರದಿಯ ಸಲಹೆಗಳನ್ನು ಈ ವರದಿಯಲ್ಲಿ ಕಡೆಗಣಿಸಿ ಆಧಾರವಿಲ್ಲದ ಯೋಗ ಇತ್ಯಾದಿಗಳನ್ನು ತುರುಕಲಾಗಿದೆ ಎಂದು ಅವರು ಟೀಕಿಸಿದ್ದಾರೆ.


ಈ ವರದಿಯಲ್ಲಿ ಜೀವತಳಿಗೆ ತಕ್ಕ ಆಹಾರ, ಭಾರತೀಯರಿಗೆ ಸಸ್ಯಾಹಾರವೇ ಸೂಕ್ತ, ಅದುವೇ ಅತ್ಯುತ್ತಮ, ಭಾರತೀಯ ಆಹಾರವೇ ಶ್ರೇಷ್ಠ ಎಂಬಿತ್ಯಾದಿಯಾಗಿ ಅನೇಕ ಆಧಾರರಹಿತವಾದ, ಬಾಲಿಶವಾದ ಹೇಳಿಕೆಗಳಿವೆ. ವಾಸ್ತವವು ಇವೆಲ್ಲಕ್ಕೆ ವ್ಯತಿರಿಕ್ತವಾಗಿದ್ದು, 16 ದೇಶಗಳ 37 ತಜ್ಞರ ಈಟ್-ಲಾನ್ಸೆಟ್ ಆಯೋಗದ ಮಾನದಂಡಕ್ಕೆ ಹೋಲಿಸಿದರೆ ಭಾರತೀಯ ಆಹಾರವು ಅನಾರೋಗ್ಯಕರವಾಗಿದೆ ಹಾಗೂ ಭಾರತೀಯರು ಧಾನ್ಯಗಳನ್ನೇ ಹೆಚ್ಚಾಗಿ ಅವಲಂಬಿಸಿಕೊಂಡು ಸಾಕಷ್ಟು ಪ್ರೋಟೀನುಗಳನ್ನು ತಿನ್ನುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಾತ್ರವಲ್ಲ, ಶೇ.63-79ರಷ್ಟು ಭಾರತೀಯರು, ಅದರಲ್ಲೂ ಗ್ರಾಮೀಣವಾಸಿಗಳು, ಪೌಷ್ಠಿಕ ಆಹಾರವನ್ನು ಕೊಳ್ಳಲು ಶಕ್ತರಾಗಿಲ್ಲ ಎನ್ನುವುದೂ ವರದಿಯಾಗಿದೆ. ಭಾರತದಲ್ಲಿ ಅಪೌಷ್ಠಿಕತೆಯ ಪ್ರಮಾಣವು 38.4% ದಿಂದ 2022ರ ವೇಳೆಗೆ 25% ಗೆ ಇಳಿದಿದೆ ಎಂಬ ಇನ್ನೊಂದು ಸುಳ್ಳನ್ನು ಈ ವರದಿಯಲ್ಲಿ ಹೇಳಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಆದರೆ ವಾಸ್ತವದಲ್ಲಿ, 5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯನುಸಾರ 707 ಜಿಲ್ಲೆಗಳ ಪೈಕಿ 341 ಜಿಲ್ಲೆಗಳಲ್ಲಿ 2016ರಿಂದ 2021ರ ನಡುವೆ 5 ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಕುಪೋಷಣೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರ ಜೊತೆಗೆ, ಕೋವಿಡ್ ನೆಪದಲ್ಲಿ ಮಾಡಲಾದ ಲಾಕ್ ಡೌನ್ ಹಾಗೂ ಶಾಲೆಗಳ ಮುಚ್ಚುವಿಕೆಯಿಂದ ಮಕ್ಕಳ ಪೋಷಣೆಯು ಇನ್ನಷ್ಟು ಕುಂಠಿತವೇ ಆಗಿದೆ. ಈ ತಜ್ಞರೆಂಬವರ ವರದಿಯು ಜೀವನ ಶೈಲಿಯ ರೋಗಗಳಿಗೆ ಮೊಟ್ಟೆ ಹಾಗೂ ಮಾಂಸಗಳನ್ನು ದೂರಿದೆಯಾದರೂ, ಅದಕ್ಕೆ ಯಾವುದೇ ಆಧಾರಗಳನ್ನು ಒದಗಿಸಿಲ್ಲ. ಅತ್ತ, ವಿವಿಧ ಬಗೆಯ ಶರ್ಕರಗಳ, ಉದಾಹರಣೆಗೆ ಹಣ್ಣಿನ ಸಕ್ಕರೆ ಫ್ರಕ್ಟೋಸ್, ಧಾನ್ಯಗಳ ಸಕ್ಕರೆ ಗ್ಲೂಕೋಸ್, ಅತಿ ಸೇವನೆಯೇ ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ ಮತ್ತಿತರ ಕಾಯಿಲೆಗಳಿಗೆ ಕಾರಣವೆನ್ನುವುದಕ್ಕೆ ಬೆಟ್ಟದಷ್ಟು ಸಾಕ್ಷ್ಯಾಧಾರಗಳೀಗ ಲಭ್ಯವಿವೆ; ಮಾತ್ರವಲ್ಲ, ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಕಂಡುಬರುವ ಎಡಿಎಚ್ಡಿ, ಖಿನ್ನತೆ, ಆತಂಕ ಮತ್ತಿತರ ಮಾನಸಿಕ ಸಮಸ್ಯೆಗಳಿಗೂ ಇವೇ ಆಹಾರಗಳೊಂದಿಗೆ ಸಂಬಂಧ ಕಲ್ಪಿಸುವ ವರದಿಗಳೂ ಬರುತ್ತಲೇ ಇವೆ. ಇದಕ್ಕಿದಿರಾಗಿ, ಮೊಟ್ಟೆ ಹಾಗೂ ಮಾಂಸಗಳ ಸೇವನೆಯು ಬೊಜ್ಜು ಮತ್ತಿತರ ಸೋಂಕಲ್ಲದ ಕಾಯಿಲೆಗಳನ್ನು ತಡೆಯಲು ನೆರವಾಗುತ್ತವೆ ಎನ್ನುವುದಕ್ಕೂ ಸಾಕಷ್ಟು ಆಧಾರಗಳಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೊತೆಗೆ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ವಿಶ್ವವಿದ್ಯಾಲಯವು ಯಾದಗೀರ್ ಹಾಗೂ ಗದಗ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಪ್ರಯೋಜನಗಳ ಬಗ್ಗೆ ಕಳೆದ ವರ್ಷವಷ್ಟೇ ನಡೆಸಿದ ಅಧ್ಯಯನದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ಪಡೆದ ಯಾದಗೀರ್ ಜಿಲ್ಲೆಯ ಮಕ್ಕಳು ತಮ್ಮ ದೇಹದ ತೂಕ ಹಾಗೂ ಸೌಷ್ಟವವನ್ನು ಗಣನೀಯವಾಗಿ ಹೆಚ್ಚಿಸಿಕೊಂಡರೆನ್ನುವುದು ಸಾಬೀತಾಗಿದೆ. ಇದನ್ನು ಪರಿಗಣಿಸಿಯೇ ಈಗ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ಹಿಂದುಳಿದ 7 ಜಿಲ್ಲೆಗಳಲ್ಲಿ ಮೊಟ್ಟೆ ನೀಡುವುದನ್ನು ಮುಂದುವರಿಸುವುದಷ್ಟೇ ಅಲ್ಲದೆ, ಇಡೀ ರಾಜ್ಯದಲ್ಲಿ 46 ದಿನ ಅದನ್ನು ನೀಡುವುದಕ್ಕೆ ಮುಂದಾಗಿವೆ. ಹಾಗಿರುವಾಗ ಈ ಸಮಿತಿಯ ವರದಿಯು ಕರ್ನಾಟಕ ಸರಕಾರದ ನಿರ್ಧಾರಕ್ಕೇ ವಿರುದ್ಧವಾಗಿದೆ. ಆದ್ದರಿಂದ, ಸರಕಾರವು ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಕನಿಷ್ಠ 150 ದಿನಗಳಿಗೆ ವಿಸ್ತರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.


ಈ ವರದಿಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ತಪ್ಪಿಸುವುದಕ್ಕಾಗಿ ಅವರಲ್ಲಿ ಸಮಾನತೆಯಿರಬೇಕು, ಪಂಕ್ತಿ ಭೇದವಿರಬಾರದು, ಧರ್ಮಪಾಲನೆಯಾಗಬೇಕು ಎಂದೆಲ್ಲ ಹೇಳಲಾಗಿದೆ. ಮೇಲೆ ಹೇಳಲಾದ ಅಧ್ಯಯನದಲ್ಲಿ ಯಾದಗೀರ್ ಜಿಲ್ಲೆಯಲ್ಲಿ ಕೇವಲ ಶೇ. 4ರಷ್ಟು ಮಕ್ಕಳು ಮಾತ್ರವೇ ಮೊಟ್ಟೆಯ ಬದಲು ಬಾಳೆಹಣ್ಣನ್ನು ಆಯ್ಕೆ ಮಾಡಿದ್ದರು ಮತ್ತು ಈ 4% ಮಕ್ಕಳು ಯಾವುದೇ ತಾರತಮ್ಯ ಯಾ ಮಾನಸಿಕ ವೇದನೆಗೆ ತುತ್ತಾಗಲಿಲ್ಲ. ಇದಕ್ಕೂ ಮೊದಲು 2006ರಲ್ಲಿ, ಈಗ ಮೊಟ್ಟೆ ಕೊಡಬಾರದೆನ್ನುವ ಎನ್ಇಪಿ ಸಮಿತಿಗಳ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಶ್ರೀ ಮದನ ಗೋಪಾಲ್ ಅವರೇ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದಾಗ, ನಡೆಸಿದ್ದ ಸಮೀಕ್ಷೆಯಲ್ಲಿ ಆಗ ರಾಜ್ಯದಲ್ಲಿ ಕಲಿಯುತ್ತಿದ್ದ 58 ಲಕ್ಷ ಮಕ್ಕಳಲ್ಲಿ 50 ಲಕ್ಷ ಮಕ್ಕಳು ಬಿಸಿಯೂಟದಲ್ಲಿ ಮೊಟ್ಟೆಯನ್ನೇ ಬಯಸಿದ್ದರು. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಮತ್ತಿತರ ಎಲ್ಲಾ ಸಮೀಕ್ಷೆಗಳಲ್ಲಿ ರಾಜ್ಯದ 86-96% ಜನರು ಮತ್ತು ಮಕ್ಕಳು ಮೊಟ್ಟೆ-ಮಾಂಸಾಹಾರವನ್ನೇ ಸೇವಿಸುವವರು ಎಂಬುದು ಸಾಬೀತಾಗಿರುವಾಗ ಇನ್ನುಳಿದ 4-14% ಮಂದಿಯ ನೆಪದಲ್ಲಿ ಇವರೆಲ್ಲ ಮಕ್ಕಳಿಗೆ ಮೊಟ್ಟೆಯಿಲ್ಲದಂತೆ ಮಾಡುವುದು ಕ್ರೂರವೂ, ಅಪ್ರಜಾಸತ್ತಾತ್ಮಕವೂ ಆಗುತ್ತದೆ. ಆದ್ದರಿಂದ ಈ ವರದಿಯ ಲೇಖಕರು ನಿಜಕ್ಕೂ ಪಂಕ್ತಿ ಭೇದ ನಿವಾರಣೆ, ಧರ್ಮಪಾಲನೆಗಳ ಬಗ್ಗೆ ಆಸಕ್ತರಾಗಿದ್ದಲ್ಲಿ ಈ ಬಹುಸಂಖ್ಯಾತ ಮಕ್ಕಳಿಗೆ ಮೊಟ್ಟೆಯನ್ನು ಒದಗಿಸಬೇಕು ಮತ್ತು ಇನ್ನುಳಿದ ಮಕ್ಕಳಿಗೆ ಅವರಿಷ್ಟದ ಆಹಾರವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.


ಜೈಮಿನೀಯ ಬ್ರಾಹ್ಮಣ, ಆಯುರ್ವೇದ ಮತ್ತಿತರ ಪ್ರಾಚೀನ ಗ್ರಂಥಗಳ ಬಗ್ಗೆ ಬಹಳಷ್ಟು ಆಸ್ಥೆಯನ್ನು ತೋರಿಸಿರುವ ಈ ಸಮಿತಿಯ ಸದಸ್ಯರು ಮಾಂಸಾಹಾರಗಳನ್ನು ಪಟ್ಟಿ ಮಾಡಿ ಅವುಗಳ ಸದ್ಗುಣಗಳನ್ನು ಹೊಗಳಿ, ಅದಕ್ಕೆ ಆಧ್ಯಾತ್ಮಿಕ ಸಮರ್ಥನೆಗಳನ್ನೂ ಒದಗಿಸಿರುವ ಶತಪಥ ಬ್ರಾಹ್ಮಣ (11.7.1.3 ಮತ್ತು 12.9.1.1), ಜೈಮಿನೀಯ ಬ್ರಾಹ್ಮಣ (1.42-44), ಮನು ಸ್ಮೃತಿ (5:28-33), ಚರಕ ಸಂಹಿತೆ (ಶರೀರ ಸ್ಥಾನ 4:36-40 ಮತ್ತು 8:16, ಸೂತ್ರ ಸ್ಥಾನ 27), ಅಷ್ಟಾಂಗ ಹೃದಯ (ಸೂತ್ರ ಸ್ಥಾನ 6) ಮತ್ತು ಭಗವತ್ ಗೀತೆ (17:8-10) ಗಳನ್ನೆಲ್ಲ ಓದಿಕೊಳ್ಳಬೇಕೆಂದು ನಾವು ಸಲಹೆ ನೀಡುತ್ತಿದ್ದೇವೆ. ಹಾಗೆಯೇ, ನಮ್ಮ ನಾಡಿನ ಅತ್ಯಂತ ಗೌರವಾನ್ವಿತರಾದ, ದಾರ್ಶನಿಕ ತತ್ವಜ್ಞಾನಿಗಳಾದ, ಬುದ್ಧ ಹಾಗೂ ಬಸವಣ್ಣನವರ ಬೋಧನೆಗಳನ್ನೂ, ವಚನಗಳನ್ನೂ ಮನದಟ್ಟು ಮಾಡಿಕೊಳ್ಳಬೇಕು.ಹಾಗಾಗಿ, ಆಧುನಿಕ ವಿಜ್ಞಾನದ ಬಗ್ಗೆಯಾಗಲೀ, ಪ್ರಾಚೀನ ಗ್ರಂಥಗಳ ಬಗ್ಗೆಯಾಗಲೀ ಯಾವುದೇ ಅರಿವಿಲ್ಲದಂತೆ ಬರೆಯಲಾಗಿರುವ ಈ ಸಮಿತಿಯ ವರದಿಯನ್ನು ಈ ಕೂಡಲೇ ಸಂಪೂರ್ಣವಾಗಿ ಹಿಂಪಡೆಯಲೇಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ.


ಈ ಪತ್ರಕ್ಕೆ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಕ್ಕಳ ತಜ್ಞ ಡಾ. ಯೋಗಾನಂದ ರೆಡ್ಡಿ,
ಉಡುಪಿ ಮನೋವೈದ್ಯಕೀಯ ತಜ್ಞ ಡಾ. ಪಿವಿ ಭಂಡಾರಿ, ಡಾ. ಶಶಿಧರ ಬೀಳಗಿ, ನೇತ್ರ ತಜ್ಞ ಡಾ. ವಸುಧೇಂದ್ರ ಎನ್,

ಆಸ್ಟ್ರೇಲಿಯಾ ಸಿಡ್ನಿಯ ರೇಡಿಯೋಲಜಿಸ್ಟ್ ಡಾ. ರಾಜೇಶ್ ಪಂಪಾಪತಿ, ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗೂ ಎಸ್ ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕ ಡಾ. ನಿರಂಜನಾರಾಧ್ಯ ವಿಪಿ. ಸಹಿ ಹಾಕಿದ್ದಾರೆ.

Join Whatsapp
Exit mobile version