ಹೊಸದಿಲ್ಲಿ: ಚುನಾವಣೋತ್ತರ ಸಮೀಕ್ಷೆಗಳು ಯಾವಾಗಲೂ ಬಿಜೆಪಿ ಪರವಾಗಿಯೇ ಇರುತ್ತವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ವ್ಯಂಗ್ಯವಾಡಿದೆ.
ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಎಪಿ ನಾಯಕ ರಾಘವ್ ಚಡ್ಡ, ದೇಶದ ಯಾವುದೇ ಚುನಾವಣೆ ಬಳಿಕ ನಡೆಯುವ ಮತಗಟ್ಟೆ ಸಮೀಕ್ಷೆಗಳು ಯಾವಾಗಲೂ ಬಿಜೆಪಿಯ ಪರವಾಗಿಯೇ ಇರುತ್ತವೆ ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ಎಎಪಿ ಕಳಪೆ ಪ್ರದರ್ಶನ ನೀಡಿದೆ ಎಂದು ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ರಾಘವ್ ಚಡ್ಡ, ಗುಜರಾತ್‌ನಲ್ಲಿ ಹಾಗೂ ದೆಹಲಿ ಪಾಲಿಕೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ನೀಡಿರುವ ಸ್ಥಾನಗಳಿಗಿಂತಲೂ ಎಎಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ತೋರಲಿದೆ ಎಂದು ತಿಳಿಸಿದ್ದಾರೆ.
ಎಎಪಿ ಮತದಾರರು ಶಾಂತ ಸ್ವಭಾವದವರು, ಅವರು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.