ಚಿಕ್ಕಮಗಳೂರು: ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾನಿಗೊಳಗಾಗಿ ಬೆಳೆಗಾರರರು ಚಿಂತಾಕ್ರಾಂತರಾಗಿರುವ ಚಿತ್ರಣ ಅಜ್ಜಂಪುರ ತಾಲೂಕಿನಲ್ಲಿ ಕಂಡು ಬಂದಿದೆ.
ತಾಲೂಕಿನ ಮುಕ್ಕಾಲು ಭಾಗ ಕಪ್ಪು ಭೂಮಿ ಇದ್ದು, ಈರುಳ್ಳಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ಈರುಳ್ಳಿಯು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರ ಆರ್ಥಿಕ ಮೂಲವೂ ಹೌದು. ಸಾಧಾರಣ ಮಳೆಯಾದರೆ, ಉತ್ತಮ ಇಳುವರಿ ಬರುತ್ತದೆ. ಹಾಗಾಗಿಯೇ ಶೇ 90 ಕ್ಕಿಂತ ಹೆಚ್ಚಿನ ರೈತರು ಈರುಳ್ಳಿ ಬೆಳೆಯುತ್ತಾರೆ.
ಆರಂಭದಲ್ಲಿಯೇ ವಾಡಿಕೆಗಿಂತ ಹೆಚ್ಚಾದ ಮಳೆ ಈರುಳ್ಳಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿತು. ಮಳೆಯಿಂದ ಈರುಳ್ಳಿ ಗಡ್ಡೆಗಳು ಕೊಳೆಯುವ ಹಂತ ತಲುಪಿವೆ. ಹೊಲದಲ್ಲಿಯೇ ಬಿಟ್ಟರೂ ಅದರಿಂದ ಮುಂದಿನ ಬೆಳೆಗೆ ಹಾನಿಯಾಗುತ್ತದೆ. ಕೃಷಿ ಕಾರ್ಮಿಕರನ್ನು ಕರೆಸಿ, ಗಡ್ಡೆ ಕಿತ್ತು ಹೊರಕ್ಕೆ ಹಾಕಿಸಲು ಸಾಕಷ್ಟು ಖರ್ಚು ಮಾಡಬೇಕಿದೆ.ಬೆಳೆ ಹಾಳಾಗಿದ್ದರಿಂದ ಸಾಲದ ಬಡ್ಡಿ ಕಟ್ಟಲೂ ಹಣವಿಲ್ಲದೇ ಪರದಾಡುತ್ತಿದ್ದೇವೆ. ’ ಎಂದು ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.