ನವದೆಹಲಿ: 2012ರಲ್ಲಿ ನಡೆದಿದ್ದ ಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಗೀತಿಕಾ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಗೋಪಾಲ್ ಕಂಡಾ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್ ಅವರು ಗೋಪಾಲ್ ಕಂಡಾ ಹಾಗೂ ಮತ್ತೊಬ್ಬ ಆರೋಪಿ ಅರುಣಾ ಛಡ್ಡಾ ಅವರನ್ನು ನಿರ್ದೋಷಿ ಎಂದು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಆರೋಪ ಸಾಭೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
2012ರ ಆ. 5ರಂದು ದೆಹಲಿ ವಾಯವ್ಯ ಭಾಗದಲ್ಲಿರುವ ಅಶೋಕ ವಿಹಾರದಲ್ಲಿರುವ ಮನೆಯಲ್ಲಿ ಗೀತಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಆ. 4ರಂದು ಗೀತಿಕಾ ಅವರು ಬರೆದಿಟ್ಟಿದ್ದರು ಎನ್ನಲಾದ ಮರಣ ಪತ್ರದಲ್ಲಿ ಕಂಡಾ ಹಾಗೂ ಛಡ್ಡಾ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿತ್ತು.