ಪಾಟ್ನ: ಬಿಹಾರ ಸರಕಾರವು ಜೈಲು ನಿಯಮಾವಳಿಯನ್ನು ಬದಲಿಸಿದ್ದು, ಅದರಂತೆ 14 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೆರೆಮನೆಯಲ್ಲಿ ಇದ್ದ 27 ಜನರನ್ನು ಬಿಡುಗಡೆ ಮಾಡಿದೆ.
ಬಿಹಾರದ ಸಹರ್ಸಾ ಜೈಲಿನಲ್ಲಿದ್ದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ ಸಹ ಗುರುವಾರ ಬೆಳಿಗ್ಗೆ ಹೊಸ ನಿಯಮದಡಿ ಬಿಡುಗಡೆ ಆದರು. 1994ರಲ್ಲಿ ಗೋಪಾಲ್ ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಅವರು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು.
ಮಾಜಿ ಸಂಸದ ಆನಂದ ಸಿಂಗ್ ಬಿಡುಗಡೆಗೆ ಸ್ವಾಗತ ಕೋರುವ ಪೋಸ್ಟರ್ ಗಳು ಬಹಳ ಕಡೆ ಕಾಣಿಸಿಕೊಂಡಿವೆ. ವೀರ ಕುನ್ವರ್ ಸಿಂಗ್ ಚೌಕದಲ್ಲಿ ಈ ಸ್ವಾಗತದ ಪೋಸ್ಟರ್ ಗಳೇ ತುಂಬಿದ್ದವು. ಇತ್ತೀಚೆಗೆ ಅವರು ತಮ್ಮ ಶಾಸಕ ಮಗ ಚೇತನ್ ಆನಂದನ ಎಂಗೇಜ್ ಮೆಂಟಿಗೆ ಪೆರೋಲ್ ನಲ್ಲಿ 15 ದಿನ ಹೊರಗೆ ಬಂದಿದ್ದರು.
ಬುಧವಾರ ನಿಯಮ ಜಾರಿಗೆ ಬರುತ್ತಲೇ ಜೈಲು ಇಲಾಖೆಯು ರಾಜ್ಯದ ನಾನಾ ಜೈಲುಗಳಲ್ಲಿದ್ದ 14 ಜನರನ್ನು ಬಿಡುಗಡೆ ಮಾಡಿದೆ. ಆನಂದ್ ಮೊಹನ್ ಬಿಡುಗಡೆ ಬಗ್ಗೆ ತಕರಾರು ತೆಗೆದ ಬಿಜೆಪಿಯವರಿಗೆ ಗುಜರಾತಿನಲ್ಲಿ ಬಿಲ್ಕೀಸ್ ಬಾನು ಕೇಸಿನಲ್ಲಿ ಡಜನ್ ಗಟ್ಟಲೆ ಜನರನ್ನು ಬಿಟ್ಟಿದ್ದೀರಲ್ಲಾ ಎಂದು ನಿತೀಶ್ ಕುಮಾರ್ ಬೆಂಬಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
“ಗುಜರಾತಿನಲ್ಲಿ ತೆಗೆದುಕೊಂಡ ಮಾದರಿಯ ತೀರ್ಮಾನಗಳು ನಿತೀಶ್ ಕುಮಾರ್ ಸರಕಾರದಲ್ಲೂ ನಡೆಯಲಿಕ್ಕಿದೆ. ಬಿಲ್ಕಿಸ್ ಬಾನು ಪ್ರಕರಣ ಒಂದೇ ಅಲ್ಲ; ಹಲವಿವೆ, ಇಲ್ಲೂ ಹೂಮಾಲೆಗಳು ಸಿದ್ಧವಿವೆ” ಎಂದು ಆನಂದ್ ಮೊಹನ್ ಹೇಳಿದರು.
“ನಾನು ಜಿ. ಕೃಷ್ಣಯ್ಯರ ಕುಟುಂಬದ ಬಗ್ಗೆ ಸಂತಾಪ ಹೊಂದಿದ್ದೇನೆ. ಆ ಘಟನೆ ಎರಡು ಕುಟುಂಬಗಳನ್ನು ಹಾಳು ಮಾಡಿತು. ಒಂದು ಲವ್ಲಿ ಆನಂದ್ (ಹೆಂಡತಿ) ಮತ್ತು ಜಿ. ಕೃಷ್ಣಯ್ಯ ಕುಟುಂಬ ಎಂದು ಮಾಜಿ ಸಂಸದ ಹೇಳಿದರು.
ಗೋಪಾಲ್ ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ. ಕೃಷ್ಣಯ್ಯರನ್ನು 1994ರ ಡಿಸೆಂಬರ್ 5ರಂದು ಮುಜಾಫರ್ ಪುದಲ್ಲಿ ಆನಂದ್ ಮೋಹನ್ ಅವರ ಜನ ಕೊಲೆ ಮಾಡಿದ್ದರು. ಆನಂದ ಮೋಹನ್ ರಿಂದ ಪ್ರಚೋದಿಸಲ್ಪಟ್ಟ ಜನರು ಕೃಷ್ಣಯ್ಯರನ್ನು ಕಾರಿನಿಂದ ಹೊರಗೆಳೆದು ಕೊಂದಿದ್ದರು.
ಈಗಿನ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಜಿ. ಕೃಷ್ಣಯ್ಯ 1985ನೇ ಬ್ಯಾಚಿನ ಐಎಎಸ್ ಅಧಿಕಾರಿ. 2007ರಲ್ಲಿ ಆನಂದ ಮೋಹನ್ ರಿಗೆ ಈ ಕೊಲೆ ಸಂಬಂಧ ಮರಣ ದಂಡನೆ ಶಿಕ್ಷೆಯಾಗಿತ್ತು; ಆಮೇಲೆ ಅದು ಜೀವಾವಧಿ ಶಿಕ್ಷೆಯಾಗಿ ಬದಲಾಯಿತು. ಆನಂದ ಮೋಹನ್ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆದರೆ ಅದು ಮುಗಿಯದೆ ಆನಂದ ಮೋಹನ್ ಜೈಲಿನಲ್ಲಿದ್ದರು.
ಆನಂದ್ ಮೋಹನ್ ರ ಪತ್ನಿ ಲವ್ಲಿ ಆನಂದ್ ಸಹ ಲೋಕ ಸಭಾ ಸದಸ್ಯೆ. ಮಗ ಚೇತನ್ ಆನಂದ್ ಆರ್ ಜೆಡಿಯಿಂದ ಶಾಸಕ ಆಗಿದ್ದಾರೆ.