ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ?

Prasthutha: May 31, 2022
✍️ಸಿ.ರಾಮಮನೋಹರ್ ರೆಡ್ಡಿ

ಒಂದು ಸಮಯದಲ್ಲಿ ಅಪವಾದ ಎನಿಸುತ್ತಿದ್ದ ಘಟನೆಗಳು ಈಗ ವಾಸ್ತವವಾಗುತ್ತಿವೆ

ಕಳೆದ ವಾರ ಸಾಮಾಜಿಕ ತಾಣವೊಂದರಲ್ಲಿ, ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಧ್ವಂಸ ಮಾಡಲಾಗಿದ್ದ ಕಟ್ಟಡವೊಂದರ ಮುಂದೆ ಅಸಹಾಯಕನಾಗಿ ನಿಂತಿದ್ದ ವಾಸಿಮ್ ಶೇಖ್ ಎಂಬ ವ್ಯಕ್ತಿಯ ಫೋಟೋ ಬಿತ್ತರಿಸಲಾಗಿತ್ತು. ವಾಸಿಮ್ನ ಸಣ್ಣ ಕಿರಾಣಿ ಅಂಗಡಿಯನ್ನು ಏಪ್ರಿಲ್ 11 ರಂದು ಸರ್ಕಾರ ನಡೆಸಿದ ಧ್ವಂಸ ಕಾರ್ಯಾಚರಣೆಯಲ್ಲಿ ನೆಲಸಮ ಮಾಡಲಾಗಿತ್ತು. ಇದಕ್ಕೂ ಮುನ್ನ ನಡೆದ ಕೋಮು ಗಲಭೆಗಳಲ್ಲಿ ಕಲ್ಲು ತೂರಾಟ ನಡೆಸಿದ ಆರೋಪವನ್ನು ವಾಸಿಮ್ ಶೇಖ್ ಮೇಲೆ ಹೊರಿಸಲಾಗಿತ್ತು. ಆದರೆ ವಾಸಿಮ್ ಎರಡೂ ಕೈಗಳನ್ನು ಕಳೆದುಕೊಂಡಿರುವ ವಿಕಲಾಂಗ. 2005ರ ಅಪಘಾತವೊಂದರಲ್ಲಿ ವಾಸಿಮ್ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ.

ಆದರೆ ಇದು ಗಣನೆಗೆ ಬರುವುದಿಲ್ಲ ಏಕೆಂದರೆ, ಮುಸ್ಲಿಮ್ ಸಮುದಾಯಕ್ಕೆ ಸೇರಿದ ವಾಸಿಮ್ ವಾಸಿಸುತ್ತಿದ್ದು ಕೋಮು ಗಲಭೆ ನಡೆದ ಪ್ರದೇಶದಲ್ಲಿ. ಆಡಳಿತ ವ್ಯವಸ್ಥೆಗೆ ಅವನ ಜೀವನೋಪಾಯದ ಏಕೈಕ ಮಾರ್ಗವನ್ನು ಕಸಿದುಕೊಳ್ಳಲು ಈ ಕಾರಣವೊಂದೇ ಸಾಕಾಗಿತ್ತು. ಇದು ಭಾರತ ನಡೆಯುತ್ತಿರುವ ಹಾದಿ. ಅಥವಾ ಈಗಾಗಲೇ ತಲುಪಿರುವ ತಾಣ ಎನ್ನಬಹುದು. ಮಾನವೀಯತೆಯ ಸ್ಪರ್ಶವೇ ಇಲ್ಲದ ಹಿಂಸಾತ್ಮಕ ಸಮಾಜದಲ್ಲಿ, ಕಾನೂನು ಕಟ್ಟಳೆಗಳನ್ನೂ ಮೀರಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ.
ನವ ಭಾರತದಲ್ಲಿ ಇಂದು ಕಲ್ಪಿತ ಅನ್ಯರ ವಿರುದ್ಧ ದ್ವೇಷ ಕಾರುವ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಇಲ್ಲಿ ಸರ್ಕಾರಗಳು ಕಾನೂನು ನಿರ್ವಹಣೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಉಲ್ಲಂಘನೆ ಮಾಡುತ್ತವೆ. ದೇಶದೆಲ್ಲೆಡೆ ಕೆಲವು ಗುಂಪುಗಳು ಮುಸ್ಲಿಮರಲ್ಲಿ ಭೀತಿ ಹುಟ್ಟಿಸುವುದರಲ್ಲಿ ತೊಡಗಿವೆ. ಯಾವುದೇ ಗಲಭೆ ಸಂಭವಿಸಿದ ಕೂಡಲೇ ಆಡಳಿತ ವ್ಯವಸ್ಥೆಯು ಮುಸ್ಲಿಮರ ಮನೆಗಳನ್ನು, ಅಂಗಡಿ ಮುಗ್ಗಟ್ಟುಗಳನ್ನು, ವ್ಯಾಪಾರದ ನೆಲೆಗಳನ್ನು ನಾಶಪಡಿಸುತ್ತದೆ. ಒಂದು ರಾಜಕೀಯ ಪಕ್ಷದ ನಾಯಕತ್ವ ಮೌನ ವಹಿಸುತ್ತದೆ. ಏಕೆಂದರೆ ಈ ಹಿಂಸಾತ್ಮಕ ಬೆಳವಣಿಗೆಗಳು ದ್ವೇಷ ರಾಜಕಾರಣವನ್ನು ಕ್ರೋಢೀಕರಿಸುವ ಮೂಲಕ ಚುನಾವಣೆಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತದೆ. ಇಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಯಾವುದೇ ಸಲಹೆ ಪಡೆಯುವುದಿಲ್ಲ ಬದಲಾಗಿ ರಾಜಕೀಯ ವಾತಾವರಣಕ್ಕನುಗುಣವಾಗಿ ಪಡೆಯುತ್ತಾರೆ. ಈ ವ್ಯವಸ್ಥೆಯಲ್ಲಿ ಹಿಂಸೆಗೊಳಗಾದ ಸಂತ್ರಸ್ತರನ್ನೇ ಶಂಕಿತರನ್ನಾಗಿ ಪರಿಗಣಿಸಿ ಜಾಮೀನು ರಹಿತವಾಗಿ ಸೆರೆಮನೆಗೆ ತಳ್ಳಲಾಗುತ್ತದೆ. ನ್ಯಾಯಾಲಯಗಳು ವಾಸ್ತವಕ್ಕೆ ವಿಮುಖವಾಗಿರುತ್ತವೆ. ಅಥವಾ ಹೆಚ್ಚೆಂದರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ನಾವು ಸಾಮಾನ್ಯವಾಗಿ ಸಂಭಾವಿತರೆಂದು ಭಾವಿಸುವ ಬಹುತೇಕ ಎಲ್ಲ ವರ್ಗಗಳ ಜನರಲ್ಲೂ ಅನೇಕರು ಈ ಬೆಳವಣಿಗೆಗಳ ಬಗ್ಗೆ ಸಂತೃಪ್ತರಾಗಿರುತ್ತಾರೆ. ತಮ್ಮ ಸಹಜೀವಿಗಳ ಮೇಲೆ ನಡೆಯುವ ಹಲ್ಲೆಗಳನ್ನು ಸಂಭ್ರಮಿಸುತ್ತಾರೆ. ಸ್ವಾತಂತ್ರ್ಯೋತ್ಸವದ 75ನೆಯ ವರ್ಷದಲ್ಲಿ ಭಾರತ ಇಲ್ಲಿಗೆ ಬಂದು ನಿಂತಿದೆ.


ಬುಲ್ಡೋಜರ್ ಪ್ರೇರಿತ ಹಿಂಸೆಯು ತರ್ಕಸಮ್ಮತಿಯನ್ನು ಪಡೆದು, ಅತಿಕ್ರಮಣ ಮತ್ತು ಒತ್ತುವರಿಯನ್ನು ಕೊನೆಗೊಳಿಸುವ ನೆಪದಲ್ಲಿ ಧ್ವಂಸ ಕಾರ್ಯಾಚರಣೆಯು ಕಾಯ್ದೆಯಾಗಿಯೇ ಜಾರಿಯಾಗುತ್ತಿದೆ. ನಕಲಿ ಸುದ್ದಿಗಳು ಮತ್ತು ವಾಟ್ಸಾಪ್ ವಿಶ್ವವಿದ್ಯಾಲಯದ ಪಂಡಿತರ ದೃಷ್ಟಿಯಲ್ಲಿ ಇದು ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸುವಂತೆಯೇ ತೋರುತ್ತದೆ. ಈ ರೀತಿಯ ಆಡಳಿತವೇ ಉತ್ತರಪ್ರದೇಶ ಮುಖ್ಯಮಂತ್ರಿಯನ್ನು ಜನಪ್ರಿಯರನ್ನಾಗಿ ಮಾಡಿದೆ. ಈಗ ಇತರ ರಾಜ್ಯಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇನ್ನು 18 ತಿಂಗಳಲ್ಲಿ ಚುನಾವಣೆಗಳನ್ನು ಎದುರಿಸಲಿರುವ ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಈ ನೀತಿಯನ್ನು ಈಗಾಗಲೇ ಅನುಕರಿಸಲಾಗುತ್ತಿದೆ. ಈ ಹೊಸ ಅಸ್ತ್ರವು ರಾಜಧಾನಿ ದೆಹಲಿಯನ್ನೂ ತಲುಪಿದ್ದು, ದೆಹಲಿ ಆಡಳಿತವು ಸುಪ್ರೀಂಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಕೆಲವು ಗಂಟೆಗಳ ಕಾಲ ತನ್ನ ಧ್ವಂಸ ಕಾರ್ಯಾಚರಣೆಯನ್ನು ನಡೆಸಿದೆ.
ದೇಶಾದ್ಯಂತ ಕೋಮು ಗಲಭೆಗಳಿಗೆ ಪರೋಕ್ಷ ಪ್ರೋತ್ಸಾಹ ನೀಡುವ ಸರ್ಕಾರಗಳ ಒಂದು ಹೊಸ ಆಯಾಮವನ್ನು ಬುಲ್ಡೋಜರ್ ಹಿಂಸೆಯಲ್ಲಿ ಕಾಣುತ್ತಿದ್ದೇವೆ. ಇದು ದಿನೇ ದಿನೇ ಹದಗೆಡುತ್ತಿದ್ದು ಇಂದು ಆಘಾತಕಾರಿಯಾಗಿ, ಅಚ್ಚರಿದಾಯಕವಾಗಿ ಕಾಣುವುದು ಮರುದಿನವೇ ವಾಸ್ತವವಾಗಿರುತ್ತದೆ. ಗುಂಪು ಥಳಿತ ಮತ್ತು ಆರ್ಥಿಕ ಬಹಿಷ್ಕಾರಗಳು ಈಗ ನನೆಗುದಿಗೆ ಬಿದ್ದಿವೆ. 2015ರಲ್ಲಿ ದಾದ್ರಿಯಲ್ಲಿ ಗುಂಪು ಥಳಿತಕ್ಕೆ ಬಲಿಯಾದ ಮುಹಮ್ಮದ್ ಅಕ್ಲಾಖ್ ನನ್ನು ಯಾರು ನೆನಪಿಸಿಕೊಳ್ಳುತ್ತಾರೆ? ಅಥವಾ 2017ರ ಈದ್ ಸಂದರ್ಭದಲ್ಲಿ ತನ್ನ ಹಳ್ಳಿಗೆ ತೆರಳುತ್ತಿದ್ದ 17 ವರ್ಷದ ಜುನೈದ್ ಕೊಲೆಯಾದುದನ್ನು ಯಾರು ಸ್ಮರಿಸುತ್ತಾರೆ? ಏಳು ತಿಂಗಳ ಹಿಂದೆ ಅಸ್ಸಾಂನಲ್ಲಿ ಅತಿಕ್ರಮಿತ ಪ್ರದೇಶವನ್ನು ತೆರವು ಮಾಡುವ ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮೊಯಿನುಲ್ ಹಕ್ ನನ್ನಾಗಲಿ, ಆತನ ಶವದ ಮೇಲೆ ಸಂಭ್ರಮಿಸಿ ನರ್ತನ ಮಾಡಿದ ಪತ್ರಿಕಾ ಛಾಯಾಗ್ರಾಹಕನನ್ನಾಗಲೀ ಯಾರು ನೆನಪಿಸಿಕೊಳ್ಳುತ್ತಾರೆ?


ಈಗ ಮುಸ್ಲಿಮರ ಹತ್ಯೆಗೆ ಮುಕ್ತವಾಗಿ ಕರೆ ಕೊಡುವುದು ಸಾಮಾನ್ಯವಾಗಿ ಹೋಗಿದೆ. ಕಳೆದ ವರ್ಷ ಇಂತಹ ಒಂದು ಘಟನೆ ಮೊದಲ ಬಾರಿಗೆ ನಡೆದಾಗ ಪೊಲೀಸರು ಅರೆಮನಸ್ಸಿನಿಂದಲೇ ಕಾರ್ಯಪ್ರವೃತ್ತರಾಗಿದ್ದರು. ಈಗ ದೆಹಲಿ ಪೊಲೀಸರು, ಸಮೂಹ ಕೊಲೆಗೆ ಮುಕ್ತ ಕರೆ ನೀಡಿರುವುದು ಕೇವಲ ಒಂದು ಧರ್ಮದ ರಕ್ಷಣೆಗಾಗಿ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ನಾವು ಸಾಮೂಹಿಕ ಹತ್ಯೆಯ ಭೀತಿಗೊಳಗಾಗಬೇಕೇ? ಅನೇಕ ವಿಶ್ಲೇಷಕರು ಹೇಳಿರುವಂತೆ, ದಿನಕ್ಕೊಂದು ಗಲಭೆಯನ್ನು ಸೃಷ್ಟಿಸುತ್ತಾ ಹೋಗುವುದೇ ಆದಲ್ಲಿ ಒಂದೇ ಘಟನೆಯಲ್ಲಿ ಸಾವಿರಾರು ಜೀವ ಹರಣ ಮಾಡುವ ಅವಶ್ಯಕತೆಯಾದರೂ ಏನಿದೆ? ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ, ಈಗ ಕರ್ನಾಟಕದಲ್ಲೂ ಸಹ ಕಿರುಕುಳ ನೀಡುವ, ಭೀತಿಗೊಳಪಡಿಸುವ ಮತ್ತು ಹತ್ಯೆ ಮಾಡುವ ಕೃತ್ಯಗಳನ್ನು ಹೊರಗುತ್ತಿಗೆ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದ ಈ ದುಷ್ಕರ್ಮಿಗಳು ಸರ್ವ ಸ್ವತಂತ್ರರಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ ಯಾವುದೇ ರಾಜಕೀಯ ಪಕ್ಷದ ಮಾರ್ಗದರ್ಶನವೂ ಅಗತ್ಯವಿರುವುದಿಲ್ಲ. ಆದರೂ ಮತಾಂಧತೆಯ ವಿಷಬೀಜದಿಂದ ಆವೃತರಾಗಿರುವ ಇವರು ತಮ್ಮ ಕಾರ್ಯನಿರ್ವಹಿಸುತ್ತಿರುತ್ತಾರೆ.


ಈ ಕಾವಲುಪಡೆಗಳ ಕಾರ್ಯಾಚರಣೆಗಳು ಅನ್ಯಮತ ದ್ವೇಷವನ್ನು ಹೆಚ್ಚಿಸುವುದೇ ಅಲ್ಲದೆ ರಾಜಕೀಯವಾಗಿ ಚುನಾವಣೆಗಳಲ್ಲಿ ಲಾಭದಾಯಕವಾಗಿ ಪರಿಣಮಿಸುತ್ತದೆ. ಚುನಾವಣೆಗಳ ಫಲಿತಾಂಶಗಳಲ್ಲಿ ನಿರ್ಣಾಯಕವಾಗುವುದು ಕಲ್ಯಾಣ ಯೋಜನೆಗಳ ಲಾಭಾರ್ಥಿ ಅಥವಾ ಫಲಾನುಭವಿಗಳಲ್ಲ. ಕೋಮು ಆಧಾರಿತ ಮತ ಧ್ರುವೀಕರಣವೇ ಆಗಿರುತ್ತದೆ. ಇದು ಸ್ಪಷ್ಟ. ಚುನಾವಣೆಗಳಲ್ಲಿ ಉಪಯುಕ್ತವಾಗಲೆಂದೇ ಸೃಷ್ಟಿಸಲಾಗಿರುವ ಈ ರಾಜಕೀಯ ವಾತಾವರಣವನ್ನು ಗಮನಿಸಿಯೂ, ಸಮೂಹ ಹಿಂಸೆಯ ವಿರುದ್ಧ ರಾಜಕೀಯ ಪಕ್ಷಗಳು ದನಿ ಎತ್ತಬೇಕು ಎಂದು ಹೇಗೆ ಅಪೇಕ್ಷಿಸಲು ಸಾಧ್ಯ? ಇಂದು ಗುಂಪುಗಳು ಒಂದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಲ್ಲೆ ನಡೆಸಲು ಮುಕ್ತ ಅವಕಾಶ ಹೊಂದಿದ್ದರೆ ಮುಂಬರುವ ದಿನಗಳಲ್ಲಿ ಇತರ ಸಮುದಾಯಗಳೂ ಹಲ್ಲೆಗೊಳಗಾಗುತ್ತವೆ. ಮುಂದೆ ಯಾವ ಮತೀಯ ಅಲ್ಪಸಂಖ್ಯಾತರು ಗುರಿಯಾಗುತ್ತಾರೆ? ಯಾವ ಕೆಳಜಾತಿಗಳು ಗುರಿಯಾಗುತ್ತವೆ ? ಸರ್ಕಾರಗಳ ಕಣ್ಣೆದುರಿನಲ್ಲೇ ನಡೆಯುತ್ತಿರುವ ಮತೀಯ ಕಾವಲುಪಡೆಗಳ ಈ ಹಿಂಸೆಯನ್ನು ನಿಯಂತ್ರಿಸಲೂ ಸಾಧ್ಯವಾಗುವುದಿಲ್ಲ. ಒಂದು ಹಂತದಲ್ಲಿ ಈ ಪಡೆಗಳು ತಮ್ಮ ನಿರ್ವಾಹಕರ ನಿಯಂತ್ರಣವನ್ನೂ ಮೀರಿ ಮುನ್ನಡೆದಿರುತ್ತವೆ. ಆಗ ಭಾರತ ಈ ಭೀಕರ ಸುಂಟರಗಾಳಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ.


ನಾವು ಎದುರು ನೋಡುತ್ತಿರುವ ಮಹಾವಿನಾಶದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬಹುದು ಎಂದು ನನ್ನಂತಹ ಕೆಲವು ಲೇಖಕರು ಭಾವಿಸಿರಬಹುದು. ಆದರೆ ಅದು ಸಾಧ್ಯವಾಗದಿರಬಹುದು.. ಸೈದ್ಧಾಂತಿಕ ದ್ವೇಷ, ಬಲಾಢ್ಯ ರಾಷ್ಟ್ರೀಯತೆ ಮತ್ತು ಅಮಾನುಷತೆಯಿಂದ ಕೂಡಿದ ಈ ಬೃಹತ್ ಅಲೆಯ ಮುಂದೆ ನಾವು ನಿರ್ವೀರ್ಯರಾಗುತ್ತೇವೆ. ಚಾರಿತ್ರಿಕ ಪ್ರಮಾದಗಳನ್ನು ಸರಿಪಡಿಸುವ ನೆಪದಲ್ಲಿ ಎಲ್ಲವೂ ನಡೆಯುತ್ತದೆ. ಶತಮಾನಗಳ ಕಾಲ ದಲಿತರ ವಿರುದ್ಧ ನಡೆದ ಹಿಂಸೆಯ ಮತ್ತೊಂದು ಸ್ವರೂಪವನ್ನು ಈಗ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ದ್ವೇಷ ಕಾರ್ಯಾಚರಣೆಯಲ್ಲಿ ಕಾಣುತ್ತಿದ್ದೇವೆ. ಈ ಬೆಳವಣಿಗೆಗಳ ನಡುವೆಯೇ ನಾವು ಸಮ್ಮತಿಸಲಾರದಂತಹ ಭಾರತದ ಒಂದು ಮುಖವನ್ನು ನೋಡಲು ಅಣಿಯಾಗಬೇಕಿದೆ. ಇತಿಹಾಸಕಾರ ಉಪಿಂದರ್ ಸಿಂಗ್ ಅವರ ಮಾತುಗಳನ್ನೇ ಕೊಂಚ ಬದಲಿಸಿ ಹೇಳುವುದಾದರೆ, ಮಹಾವೀರ, ಬುದ್ಧ, ಅಶೋಕ ಮತ್ತು ಗಾಂಧಿ ಮುಂತಾದವರ ಶಾಂತಿಯ ಸಂದೇಶಗಳು, ಸಾವಿರಾರು ವರ್ಷಗಳ ಕಾಲ ಇದ್ದ ಹಿಂಸಾತ್ಮಕ ಸಮಾಜದಲ್ಲಿ ಕೇವಲ ಅಪವಾದಗಳಷ್ಟೇ. ಈಗ 21ನೆಯ ಶತಮಾನದಲ್ಲಿ ನಾವು ಭಾರತದ ಹಿಂಸಾತ್ಮಕ ಸ್ವರೂಪವನ್ನು, ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಆಳಲ್ಪಟ್ಟಿರುವ ಭಾರತದಲ್ಲಿ, ಪೂರ್ಣ ರೂಪದಲ್ಲಿ ಕಾಣುತ್ತಿದ್ದೇವೆ.


ಆದಾಗ್ಯೂ ಕೆಲವು ಅಪವಾದಗಳಿರುವುದು ಸಮಾಧಾನಕರವಾಗಿ ಕಾಣುತ್ತದೆ. ಈ ಕೂಪದಿಂದ ಪಾರಾಗಲು ನಾವು ಇಂತಹ ಕೆಲವು ಮಾನವೀಯತೆಯ ತೊರೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕಿದೆ. ಉದಾಹರಣೆಗೆ ಮುಸ್ಲಿಮರನ್ನು ಹುಡುಕಿಕೊಂಡು ಬಂದ ಒಂದು ಗುಂಪನ್ನು ದಿಟ್ಟತನದಿಂದ ಎದುರಿಸಿದ್ದೇ ಅಲ್ಲದೆ 12 ಮುಸಲ್ಮಾನರನ್ನು ರಕ್ಷಿಸಿದ ರಾಜಸ್ಥಾನದ ಹಿಂದೂ ಮಹಿಳೆ ಕರೌಲಿಯ ಮಧುಲಿಕಾ ರಜಪೂತ್ ನಮಗೆ ಕಾಣಬೇಕಿದೆ ಅಥವಾ ದೆಹಲಿಯ ಜಹಂಗೀರ್ ಪುರಿಯಲ್ಲಿ ಹಿಂದೂ ಅಂಗಡಿಯ ಮಾಲಿಕನೊಬ್ಬನ ನಾನು ಒಬ್ಬ ಹಿಂದೂ, ಆತ ಮುಸ್ಲಿಂ…
ನಾವು ಸ್ನೇಹಿತರು, ಸಂಕಷ್ಟದ ಸಮಯದಲ್ಲಿ ನಾವು ಪರಸ್ಪರ ನೆರವಾಗುತ್ತೇವೆ…ಈ ಗುಂಪುಗಳು ನಮ್ಮ ಬದುಕನ್ನು ಹಾಳುಮಾಡಲು ಹೊರಟಿವೆ. ನಾನು ಏಕಾಂಗಿಯಾದರೂ ಸರಿ, ಮಸೀದಿಯನ್ನು ಕೆಡವಲು ಬುಲ್ಡೋಜರ್ ಬಂದರೆ ಅದರ ಎದುರು ನಿಂತು ಮಸೀದಿಯನ್ನು ರಕ್ಷಿಸುತ್ತೇನೆ ಎಂಬ ಮಾತುಗಳಲ್ಲಿ ಭರವಸೆ ಇಡಬೇಕಿದೆ.
ಇಂತಹ ಹಿಂದೂ ಸೋದರ ಸೋದರಿಯರ ಮೇಲೆ ಭರವಸೆ ಇಟ್ಟು ನಾವು ಮುನ್ನಡೆಯಬೇಕಿದೆ.
(ಕೃಪೆ: ದಿ ಹಿಂದೂ)

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!